ಇರಾನ್ : ಅಮೆರಿಕದ ಆರ್ಥಿಕ ಯುದ್ಧ ಹೀಗೆಯೇ ಮುಂದುವರಿದರೆ ಹಾರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಯಾವುದೇ ಮಾರ್ಗದಿಂದ ಒಂದೇ ಒಂದು ಹನಿ ತೈಲವೂ ರಫ್ತಾಗದಂತೆ ತಡೆಯಲಾಗುವುದು ಎಂದು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜೈ ಎಚ್ಚರಿಸಿದ್ದಾರೆ. ಟೆಹ್ರಾನ್ ವಿರುದ್ಧದ ಅಮೆರಿಕದ ಆರ್ಥಿಕ ಅಭಿಯಾನಕ್ಕೆ ಬೆಂಬಲ ನೀಡುವ ಅಥವಾ ಭಾಗವಹಿಸುವ ಯಾವುದೇ ದೇಶದ ಕ್ರಮವನ್ನು ಇರಾನ್ 'ಯುದ್ಧದ ಕ್ರಿಯೆ' ಎಂದೇ ಪರಿಗಣಿಸಲಿದೆ ಎಂದು ಅವರು ತಮ್ಮ 'ಎಕ್ಸ್' ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳಿಂದಾಗಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವೆಯೇ ಟೆಹ್ರಾನ್‌ನಿಂದ ಈ ಕಠಿಣ ಎಚ್ಚರಿಕೆ ಹೊರಬಿದ್ದಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಆರ್ಥಿಕ ನಿರ್ಬಂಧಗಳ ಬೆದರಿಕೆಯನ್ನು ಅಪಹಾಸ್ಯ ಮಾಡಿದ್ದು, 'ಹೆಪ್ಪುಗಟ್ಟಿದ ವಿದೇಶಾಂಗ ನೀತಿಯು ಹೆಪ್ಪುಗಟ್ಟಿದ ಆರ್ಥಿಕತೆಯನ್ನಷ್ಟೇ ನೀಡುತ್ತದೆ' ಎಂದು ವಿಡಂಬನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಇಂತಹ ಭಾರಿ ನಿರ್ಬಂಧಗಳ ತಂತ್ರಗಳು ಅಂತಿಮವಾಗಿ ಸೋಲು ಅನುಭವಿಸಲಿವೆ ಎಂದು ಅವರು ವಾದಿಸಿದ್ದಾರೆ.
ಇನ್ನೊಂದೆಡೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಸರ್ದಾರ್ ಮೊಹೆಬಿ ಮಾತನಾಡಿ, ವಾಷಿಂಗ್ಟನ್‌ನ ಆರ್ಥಿಕ ಯುದ್ಧವು ಅಮೆರಿಕಕ್ಕೆ ಎದುರಾದ ಅವಮಾನಕರ ಸೋಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕದ ಆಕ್ರಮಣಕಾರಿ ಆರ್ಥಿಕ ಒತ್ತಡದ ಕುರಿತು ಟ್ರಂಪ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಇರಾನ್ ದಶಕಗಳಿಂದಲೂ ಇಂತಹ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದ್ದು, ಈ ಬೆದರಿಕೆಗಳು ತಮಗೆ ಹೊಸದೇನಲ್ಲ ಎಂದಿದ್ದಾರೆ.