ಢಾಕಾ: ಪ್ರಧಾನಮಂತ್ರಿ ತಾರಿಖ್ ರೆಹಮಾನ್ ಅವರ ಭಾರತ ಭೇಟಿಗೆ ಯಾವುದೇ ಆತುರವಿಲ್ಲ ಹಾಗೂ ರಾಷ್ಟ್ರದ ಹಿತಾಸಕ್ತಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬಾಂಗ್ಲಾದೇಶ ಸ್ಪಷ್ಟಪಡಿಸಿದೆ. ನೆರೆಯ ದೇಶ ಭಾರತದೊಂದಿಗೆ ಸಕಾರಾತ್ಮಕ ಮತ್ತು ಉತ್ತಮ ಬಾಂಧವ್ಯವನ್ನು ಬಯಸುತ್ತೇವೆಯಾದರೂ, ಅದು ಬಾಂಗ್ಲಾದೇಶದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯಗತಗೊಳ್ಳಬೇಕಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ಹುಮಾಯೂನ್ ಕಬೀರ್ ತಿಳಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಬಳಿಕ ಸೂಕ್ತ ಸಂದರ್ಭದಲ್ಲಿ ಪ್ರಧಾನಿಯವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ವೇಳೆ ನಮ್ಮ ನಿರೀಕ್ಷೆಯಂತೆ ನಾಳೆಯೇ ಒಪ್ಪಂದ ಏರ್ಪಟ್ಟರೆ ಮುಂದಿನ ವಾರವೇ ಪ್ರಧಾನಿ ಭಾರತಕ್ಕೆ ಭೇಟಿ ನೀಡಬಹುದು ಎಂದು ಕಬೀರ್ ವಿವರಿಸಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಭಾರತವು ತಾರಿಖ್ ರೆಹಮಾನ್ ಅವರನ್ನು ಆಹ್ವಾನಿಸಿದೆ. ಆದರೆ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರ ವಿಚಾರವಾಗಿ ಉಭಯ ದೇಶಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯದ ಕಾರಣದಿಂದ ತಾರಿಖ್ ಅವರ ಭಾರತ ಭೇಟಿ ಇನ್ನೂ ಖಚಿತವಾಗಿಲ್ಲ.