ಇರಾನ್ : ತನ್ನ ವಿರುದ್ಧ ಅಮೆರಿಕ ಆರಂಭಿಸಿರುವ 'ಆರ್ಥಿಕ ಯುದ್ಧ' ಹಾಗೂ ನಿರ್ಬಂಧಗಳ ಅಭಿಯಾನಕ್ಕೆ ಕೈಜೋಡಿಸದಂತೆ ಇರಾನ್ ವಿವಿಧ ದೇಶಗಳಿಗೆ ತೀವ್ರ ಎಚ್ಚರಿಕೆ ನೀಡಿದೆ. ಅಮೆರಿಕದ ಒತ್ತಡಕ್ಕೆ ಮಣಿದು ನಿರ್ಬಂಧ ಹೇರಲು ಸಾಥ್ ನೀಡುವ ದೇಶಗಳನ್ನು 'ಶತ್ರು ದೇಶಗಳು' ಎಂದು ಪರಿಗಣಿಸುವುದಾಗಿ ಇರಾನ್ ಆಡಳಿತ ಪ್ರಕಟಿಸಿದೆ.
ಇರಾನ್ ಆರ್ಥಿಕತೆಯನ್ನು ಜಾಗತಿಕವಾಗಿ ಒಂಟಿಯಾಗಿಸಲು ಅಮೆರಿಕವು ತನ್ನ ಮಿತ್ರರಾಷ್ಟ್ರಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಇರಾನ್‌ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮುಹ್ಸಿನ್ ರೇಜಾಯಿ, "ನಮ್ಮ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರಲು ಭಾಗವಹಿಸುವ ಯಾವುದೇ ದೇಶವನ್ನು ಇರಾನ್ ತನ್ನ ಶತ್ರುವೆಂದು ಭಾವಿಸುತ್ತದೆ. ಈ ದೇಶಗಳು ಅಮೆರಿಕದಿಂದ ದೂರವಿರಲು ನಿರಾಕರಿಸಿದರೆ, ಇರಾನ್ ಅವುಗಳ ಹಿತಾಸಕ್ತಿಗಳಿಗೆ ಹಾನಿ ಉಂಟುಮಾಡಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಬಳಿ ತಕ್ಕ ಪ್ರತ್ಯುತ್ತರ ನೀಡಲು ಇನ್ನೂ ಹಲವು ಮಾರ್ಗಗಳಿವೆ ಎಂದೂ ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಕೇವಲ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಇರಾನ್, ಅಮೆರಿಕವು ಆರ್ಥಿಕ ನಿರ್ಬಂಧಗಳನ್ನು ಮುಂದುವರಿಸಿದರೆ, ತನ್ನ ಸುತ್ತಮುತ್ತಲಿನ ಹಾಗೂ ಇತರ ಭಾಗಗಳಲ್ಲಿರುವ ಅಮೆರಿಕದ ತೈಲ ಸಂಸ್ಥೆಗಳು ಮತ್ತು ಆರ್ಥಿಕ ಕಂಪನಿಗಳ ಮೇಲೆಯೂ ದಾಳಿ ನಡೆಸುವುದಾಗಿ ರೇಜಾಯಿ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನೀತಿಗಳನ್ನು ತೀವ್ರವಾಗಿ ಟೀಕಿಸಿರುವ ಇರಾನ್, ಟ್ರಂಪ್ ಅವರ ಬೇಜವಾಬ್ದಾರಿತನ ಹಾಗೂ ಇರಾನ್ ಮೇಲಿನ ದಾಳಿಗಳು ಜಗತ್ತಿನಾದ್ಯಂತ ದೇಶಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಬಯಕೆಯನ್ನು ಹೆಚ್ಚಿಸಿವೆ ಎಂದು ಆರೋಪಿಸಿದೆ. ಟ್ರಂಪ್ ಆಡಳಿತವು ಜಾಗತಿಕ ಪರಮಾಣು ಭದ್ರತೆಯನ್ನು ಕಾಪಾಡುವ ಬದಲು ಆತಂಕ ಮತ್ತು ಅಭದ್ರತೆಯನ್ನು ಸೃಷ್ಟಿಸುತ್ತಿದೆ ಎಂದು ಇರಾನ್ ದೂರಿದೆ.