image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಾಲಿಯಲ್ಲಿ 'ನ್ಯೇಪಿ' ಹಬ್ಬ ಅವಹೇಳನ: ಸ್ವಿಸ್ ಪ್ರವಾಸಿಗನಿಗೆ 1 ವರ್ಷ ಜೈಲು

ಬಾಲಿಯಲ್ಲಿ 'ನ್ಯೇಪಿ' ಹಬ್ಬ ಅವಹೇಳನ: ಸ್ವಿಸ್ ಪ್ರವಾಸಿಗನಿಗೆ 1 ವರ್ಷ ಜೈಲು

ಡೆನ್‌ಪಸಾರ್ : ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಿಂದೂಗಳ ಪವಿತ್ರ 'ನ್ಯೇಪಿ' (ಮೌನ ದಿನ) ಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪದ ಮೇಲೆ 26 ವರ್ಷದ ಸ್ವಿಟ್ಜರ್ಲೆಂಡ್ ಪ್ರವಾಸಿಗ ಲೂಝಿಯನ್ ಆಂಡ್ರಿನ್ ಜ್ಗ್ರಾಗೆಗೆ ಡೆನ್‌ಪಸಾರ್ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಬಾಲಿಯಲ್ಲಿ ಆಚರಿಸಲಾಗುವ ನ್ಯೇಪಿ ದಿನದಂದು ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರೂ ಮನೆಗಳಲ್ಲೇ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಕೆಲಸ ಮಾಡುವುದು, ಮನರಂಜನೆ, ಶಬ್ದ ಮಾಡುವುದು ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧವಿರುತ್ತದೆ. ಆದರೆ, ಈ ನಿಯಮಗಳನ್ನು ಮೀರಿ ಕಡಲತೀರಕ್ಕೆ ತೆರಳಿದ್ದ ಲೂಝಿಯನ್, ಅಲ್ಲಿನ ಸ್ಥಿತಿಯನ್ನು "ಹುಚ್ಚುತನ" ಎಂದು ಬಣ್ಣಿಸಿ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪದಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬಾಲಿ ಪೊಲೀಸರು ಆತನನ್ನು ಮಾರ್ಚ್‌ನಲ್ಲಿ ಬಂಧಿಸಿದ್ದರು.

ವಿಚಾರಣೆ ವೇಳೆ ತನಗೆ ಹಬ್ಬದ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲವೆಂದು, ಹಸಿವು ಹಾಗೂ ಬೇಸರದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ ಆರೋಪಿ ಬಾಲಿ ಜನರಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾನೆ. ಆದರೆ, ಪ್ರವಾಸಿಗನ ಈ ಕೃತ್ಯ ಬಾಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಆತನನ್ನು ಹೊಣೆಗಾರನನ್ನಾಗಿ ಮಾಡುವುದು ಅಗತ್ಯ ಎಂದು ಅಧ್ಯಕ್ಷ ನ್ಯಾಯಾಧೀಶ ಟ್ಜೊಕೊರ್ಡಾ ಪುತ್ರ ಬುದಿ ಪಸ್ತಿಮಾ ತಿಳಿಸಿದ್ದಾರೆ. ಆರೋಪಿ ಈಗಾಗಲೇ ವಿಚಾರಣಾಪೂರ್ವ ಐದು ತಿಂಗಳು ಬಂಧನದಲ್ಲಿದ್ದ ಅವಧಿಯನ್ನು ಒಟ್ಟು ಜೈಲು ಶಿಕ್ಷೆಯಿಂದ ಕಡಿತಗೊಳಿಸಲಾಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

Category
ಕರಾವಳಿ ತರಂಗಿಣಿ