image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಹಾವಲ್‌ಪುರದ ಜೈಶ್ ಉಗ್ರ ಅಡ್ಡ ಮರುನಿರ್ಮಾಣ: ಪಾಕ್ ಸರ್ಕಾರದಿಂದ ₹25 ಕೋಟಿ ನೆರವು!

ಬಹಾವಲ್‌ಪುರದ ಜೈಶ್ ಉಗ್ರ ಅಡ್ಡ ಮರುನಿರ್ಮಾಣ: ಪಾಕ್ ಸರ್ಕಾರದಿಂದ ₹25 ಕೋಟಿ ನೆರವು!

ಇಸ್ಲಾಮಬಾದ್ : ಭಾರತೀಯ ಸೇನಾ ಪಡೆಗಳು ನಡೆಸಿದ್ದ 'ಆಪರೇಷನ್ ಸಿಂಧೂರ್' ಕ್ಷಿಪಣಿ ದಾಳಿಯಲ್ಲಿ ನೆಲಸಮವಾಗಿದ್ದ ಕುಖ್ಯಾತ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಬಹಾವಲ್‌ಪುರ ಪ್ರಧಾನ ಕಚೇರಿಯು ಇದೀಗ ಸಂಪೂರ್ಣವಾಗಿ ಮರುನಿರ್ಮಾಣಗೊಂಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ 'ಮರ್ಕಜ್ ಸುಭಾನ್ ಅಲ್ಲಾ' ಎಂಬ ಈ ಉಗ್ರ ನೆಲೆಯನ್ನು ಅತ್ಯಾಧುನಿಕವಾಗಿ ನವೀಕರಿಸಲಾಗಿದ್ದು, ಇದಕ್ಕೆ ಪಾಕಿಸ್ತಾನ ಸರ್ಕಾರವೇ ಕೋಟ್ಯಂತರ ರೂಪಾಯಿ ಹಣಕಾಸು ನೆರವು ನೀಡಿದೆ ಎಂಬ ಆಘಾತಕಾರಿ ಸತ್ಯ ಗುಪ್ತಚರ ಮೂಲಗಳಿಂದ ಬಯಲಾಗಿದೆ.

ಭಾರತದ ದಾಳಿ ನಡೆದು 15 ತಿಂಗಳ ಬಳಿಕ ಈ ನೆಲೆಯು ಪುನಶ್ಚೇತನಗೊಂಡಿರುವುದನ್ನು ವಿಶೇಷ ಉಪಗ್ರಹ ಚಿತ್ರಗಳು ಹಾಗೂ ದೃಶ್ಯಾವಳಿಗಳು ಖಚಿತಪಡಿಸಿವೆ. ಭಾರತೀಯ ಪಡೆಗಳು ಹೊಡೆದುರುಳಿಸಿದ್ದ ಬೃಹತ್ ಗುಮ್ಮಟಗಳನ್ನು ಪುನಃ ನಿರ್ಮಿಸಲಾಗಿದೆ. ಕೇಂದ್ರ ಸಭಾಂಗಣದಲ್ಲಿದ್ದ ಬಾಂಬ್ ದಾಳಿಯ ಕಂದಕಗಳನ್ನು ಮುಚ್ಚಿ, ಹೊಸ ಮಾರ್ಬಲ್, ಪ್ಲಾಸ್ಟರ್ ಮತ್ತು ಪೇಂಟ್ ಮೂಲಕ ದಾಳಿಯ ಯಾವುದೇ ಕುರುಹುಗಳು ಕಾಣದಂತೆ ಮರೆಮಾಚಲಾಗಿದೆ. ಇದರೊಂದಿಗೆ ಮದ್ರಸಾ ಅಲ್-ಸಾಬೀರ್ ಹಾಗೂ ಉಗ್ರ ಕಮಾಂಡರ್‌ಗಳು ನೆಲೆಸಿದ್ದ ವಸತಿ ಸಂಕೀರ್ಣಗಳನ್ನು ಸಂಪೂರ್ಣವಾಗಿ ಹೊಸದಾಗಿ ಕಟ್ಟಿ ನಿಲ್ಲಿಸಲಾಗಿದೆ.

ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ, ನಿಷೇಧಿತ ಜೈಶ್ ಸಂಘಟನೆಯ ಈ ಅಡ್ಡಯನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನ ಸರ್ಕಾರವೇ ನಗದು ಕಂತುಗಳ ರೂಪದಲ್ಲಿ ಬರೋಬ್ಬರಿ 25 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು (PKR 25 Crore) ನೀಡಿದೆ. ಇದರಲ್ಲಿ ಕೇವಲ ಕೇಂದ್ರ ಸಭಾಂಗಣದ ನವೀಕರಣಕ್ಕಾಗಿಯೇ ಸುಮಾರು 11 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಜಾಗತಿಕ ವೇದಿಕೆಗಳಲ್ಲಿ ಉಗ್ರ ನಿಗ್ರಹದ ಮಾತುಗಳನ್ನಾಡುವ ಪಾಕಿಸ್ತಾನ, ತೆರೆಮರೆಯಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳಿಗೆ ಸಾರ್ವಜನಿಕ ಹಣವನ್ನು ನೇರವಾಗಿ ಹರಿಸುತ್ತಿರುವುದು ಈ ಬೆಳವಣಿಗೆಯಿಂದ ಮತ್ತೆ ಸಾಬೀತಾಗಿದೆ.

Category
ಕರಾವಳಿ ತರಂಗಿಣಿ