ಸೊಮಾಲಿಯಾ : ಸೊಮಾಲಿಯಾದ ಪಂಟ್ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಡಲ್ಗಳ್ಳರು ವಾಣಿಜ್ಯ ಹಡಗೊಂದನ್ನು ವಶಪಡಿಸಿಕೊಂಡಿದ್ದು, ಇದರಲ್ಲಿದ್ದ 6 ಭಾರತೀಯ ನಾವಿಕರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿಯನ್ನು ಅಪಹರಿಸಿದ್ದಾರೆ. ಅಪಹೃತ ಹಡಗನ್ನು ಕ್ಯಾಮರೂನ್ ಧ್ವಜದಡಿ ಸಂಚರಿಸುತ್ತಿದ್ದ 'ಎಮ್‌ವಿ ಲೂಟುಫ್' (M/V LUTUF) ಎಂದು ಗುರುತಿಸಲಾಗಿದೆ.
ಈ ಹಡಗಿನಲ್ಲಿ ಟರ್ಕಿ ದೇಶಕ್ಕೆ ಸೇರಿದ ಶಸ್ತ್ರಾಸ್ತ್ರಗಳು, ಸುಧಾರಿತ ಸಂವಹನ ಹಾಗೂ ಉಪಗ್ರಹ ಸಾಧನಗಳು ಇದ್ದವೆಂದು ವರದಿಯಾಗಿದೆ. ಹಡಗಿನಲ್ಲಿದ್ದ 10 ಮಂದಿ ಸಿಬ್ಬಂದಿಯಲ್ಲಿ ಆರು ಭಾರತೀಯರ ಜೊತೆಗೆ ಒಬ್ಬ ಟರ್ಕಿಶ್ ಪ್ರಜೆ, ಒಬ್ಬ ಜಾರ್ಜಿಯನ್ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಈ ಕೃತ್ಯದ ಹಿಂದೆ ಎಂಟು ಜನ ಸೊಮಾಲಿಯನ್ ಕಡಲ್ಗಳ್ಳರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ವಶಪಡಿಸಿಕೊಂಡ ಹಡಗನ್ನು ಪಂಟ್ಲ್ಯಾಂಡ್‌ನ ಡಂಗೊರೊಯೊ ಜಿಲ್ಲೆಯ ಗರ್ಮಾಲ್ ಬಳಿಯ ಕರಾವಳಿಗೆ ಸಾಗಿಸಲಾಗಿದೆ. ಸದ್ಯ ಟರ್ಕಿಯ ಹೆಲಿಕಾಪ್ಟರ್ ಹಾಗೂ ಡ್ರೋನ್ಗಳು ಈ ಹಡಗಿನ ಚಲನವಲನಗಳ ಮೇಲೆ ನಿಗಾ ಇಟ್ಟಿವೆ.
ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ಸರಕು ಸಾಗಣೆ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳನ್ನು ಅಪಹರಿಸಿ, ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು ಹಣ ವಸೂಲಿ ಮಾಡುವುದು ಸೊಮಾಲಿಯನ್ ಕಡಲ್ಗಳ್ಳರ ಪ್ರಮುಖ ಕೃತ್ಯವಾಗಿದೆ. ಸೊಮಾಲಿಯಾದಲ್ಲಿ ದೀರ್ಘಕಾಲದವರೆಗೆ ಸೂಕ್ತ ಸರ್ಕಾರಿ ಆಡಳಿತ ವ್ಯವಸ್ಥೆ ಇಲ್ಲದಿರುವುದು ಹಾಗೂ ಕರಾವಳಿ ಪ್ರದೇಶದಲ್ಲಿ ನಡೆದ ಅಕ್ರಮ ಮೀನುಗಾರಿಕೆಯಿಂದ ಸ್ಥಳೀಯರ ಜೀವನೋಪಾಯ ನಾಶವಾಗಿರುವುದು ಈ ಪ್ರದೇಶದಲ್ಲಿ ಕಡಲ್ಗಳ್ಳತನ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಪ್ರಸ್ತುತ ಭಾರತೀಯ ನೌಕಾಪಡೆ ಸೇರಿದಂತೆ ಅಂತರರಾಷ್ಟ್ರೀಯ ನೌಕಾಪಡೆಗಳು ಈ ಭಾಗದಲ್ಲಿ ನಿರಂತರ ನಿಗಾ ವಹಿಸಿದ್ದು, ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿವೆ.