ಇಸ್ಲಾಮಬಾದ್ : ಪಾಕಿಸ್ತಾನದ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ಅಸಾದ್ ಕೈಸರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಪಾಕಿಸ್ತಾನಿ ನಾಗರಿಕರಿಗೆ ಆಗುತ್ತಿರುವ ತಾರತಮ್ಯದ ಕುರಿತು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ.
ಇತ್ತೀಚೆಗೆ ತಮ್ಮ ಯುಎಇ ಪ್ರವಾಸದ ಸಮಯದಲ್ಲಿ ವಿಮಾನ ಹಾರಾಟ ರದ್ದಾದಾಗ ತಮಗಾದ ಕಹಿ ಅನುಭವವನ್ನು ಅಸಾದ್ ಕೈಸರ್ ಹಂಚಿಕೊಂಡಿದ್ದಾರೆ. ವಿಮಾನ ರದ್ದಾದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಹೋಟೆಲ್ ತಂಗುವ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ, ಅಲ್ಲಿ ಕೇವಲ ಭಾರತ ಮತ್ತು ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ ಪ್ರಯಾಣಿಕರಿಗೆ ಮಾತ್ರ ಹೋಟೆಲ್ ಕೊಠಡಿಗಳನ್ನು ನೀಡಲಾಯಿತು. ಪಾಕಿಸ್ತಾನದ ಪಾಸ್‌ಪೋರ್ಟ್ ಹೊಂದಿದ್ದ ಯಾವೊಬ್ಬ ಪ್ರಯಾಣಿಕನಿಗೂ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ತಾವು ಪಾಕಿಸ್ತಾನದ ಹಿರಿಯ ರಾಜಕೀಯ ನಾಯಕ ಎಂದು ಪರಿಚಯಿಸಿಕೊಂಡರೂ ತಮಗೂ ಸಹ ಕೊಠಡಿ ನೀಡಲು ನಿರಾಕರಿಸಲಾಯಿತು ಎಂದು ಅವರು ಸಂಸತ್ತಿನಲ್ಲಿ ಆರೋಪಿಸಿದ್ದಾರೆ.
ಸಹೋದರ ಮುಸ್ಲಿಂ ರಾಷ್ಟ್ರವೆಂದು ಪರಿಗಣಿಸುವ ಯುಎಇ, ಜಾಗತಿಕ ಸಹೋದರತ್ವದ ಬಗ್ಗೆ ಮಾತನಾಡಿದರೂ ಪಾಕಿಸ್ತಾನಿ ಪ್ರಯಾಣಿಕರ ವಿರುದ್ಧ ಈ ರೀತಿಯ ದ್ವಂದ್ವ ನೀತಿ ತೋರುತ್ತಿರುವುದು ಜಗತ್ತಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಕೈಸರ್ ಕಳವಳ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಿ ನಾಗರಿಕರಿಗೆ ಮತ್ತು ಅವರ ಪಾಸ್‌ಪೋರ್ಟ್‌ಗೆ ಸೂಕ್ತ ಗೌರವ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಈ ವಿಷಯವನ್ನು ಯುಎಇ ಸರ್ಕಾರದೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚಿಸಿ ಪರಿಹರಿಸುವಂತೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.