ಅಮೇರಿಕ : ನ್ಯೂಯಾರ್ಕ್‌ನ ಟ್ರೈ-ಸ್ಟೇಟ್ ಪ್ರದೇಶದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಸಂಭ್ರಮದ ಭಾಗವಾಗಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ. ಭಾರತದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ಅಮೆರಿಕದ 250ನೇ ವಾರ್ಷಿಕೋತ್ಸವದ ಜಂಟಿ ಆಚರಣೆಯ ಅಂಗವಾಗಿ ಶನಿವಾರ ನ್ಯೂಜೆರ್ಸಿಯ ಪಾರ್ಸಿಪ್ಪನಿಯಲ್ಲಿರುವ ವೆಟರನ್ಸ್ ಮೆಮೋರಿಯಲ್ ಪಾರ್ಕ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ನಿರ್ಮಿಸಲಾದ "ಅತಿ ಹೆಚ್ಚು ಧ್ವಜಸ್ತಂಭಗಳ ಸಂಖ್ಯೆ" ಆಕೃತಿಯು ಗಿನ್ನೆಸ್ ಪುಸ್ತಕಕ್ಕೆ ಸೇರಿದೆ. 1,300ಕ್ಕೂ ಹೆಚ್ಚು ಅಮೆರಿಕ ಧ್ವಜಗಳನ್ನು ಬಳಸಿ '250' ಸಂಖ್ಯೆಯನ್ನು ರೂಪಿಸಲಾಗಿದ್ದು, ಅದರ ಸುತ್ತಲೂ ಭಾರತದ ತ್ರಿವರ್ಣ ಧ್ವಜಗಳನ್ನು ಆಕರ್ಷಕವಾಗಿ ಜೋಡಿಸಲಾಗಿತ್ತು.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ವಲಸೆ ಸಂಸ್ಥೆ 'ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್' (FIA) ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ 'ಜೊಹೊ' ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದೇ ಸಂಭ್ರಮಾಚರಣೆಯ ಭಾಗವಾಗಿ ಕ್ವೀನ್ಸ್‌ನ ಫ್ಲೋರಲ್ ಪಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಮೆರವಣಿಗೆಯಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಭಾಗವಹಿಸಿ ಗಮನ ಸೆಳೆದರು. ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, "ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮೇಯರ್" ಎಂದು ತಮ್ಮನ್ನು ಬಣ್ಣಿಸಿಕೊಂಡು, ಈ ಮೆರವಣಿಗೆ ತಮಗೆ ಎಂದಿಗೂ ಮರೆಯಲಾಗದ ಅನುಭವ ಎಂದಿದ್ದಾರೆ. ಮಾಜಿ ಮೇಯರ್ ಡೇವಿಡ್ ಡಿಂಕಿನ್ಸ್ ಅವರು ನಗರವನ್ನು ಸುಂದರವಾದ 'ಮೊಸಾಯಿಕ್' ಎಂದು ವರ್ಣಿಸಿದ್ದನ್ನು ಸ್ಮರಿಸಿದ ಮಮ್ದಾನಿ, ನ್ಯೂಯಾರ್ಕ್‌ನ ಸೌಹಾರ್ದತೆಗೆ ಶ್ರಮಿಸುತ್ತಿರುವ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಜೈನ್, ಬೌದ್ಧ ಹಾಗೂ ಸಿಖ್ ಸಮುದಾಯದ ಭಾರತೀಯ ವಲಸಿಗರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.