ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಆಂಥೋನಿ, ಪೀಟರ್ ಹಾಗೂ ಕುಮಾರ್ ಅಸಹಜವಾಗಿ ಮೃತಪಟ್ಟ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸೂಕ್ತ ಪರಿಹಾರ ಘೋಷಣೆ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಮರಣೋತ್ತರ ಪರೀಕ್ಷೆಗೆ (Post-Mortem) ಸಮ್ಮತಿಸುವುದಿಲ್ಲ ಎಂದು ಮೃತರ ಕುಟುಂಬಸ್ಥರು ಪಟ್ಟು ಹಿಡಿದಿದ್ದರೂ, ಪೊಲೀಸರು ಹಾಗೂ ಜಿಲ್ಲಾಡಳಿತ ಅಮಾಯಕರನ್ನು ಯಾಮಾರಿಸಿ ಶವಪರೀಕ್ಷೆ ಪೂರ್ಣಗೊಳಿಸಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣದ ಆರಂಭದಲ್ಲಿ ಮೃತದೇಹಗಳನ್ನು ವೈಜ್ಞಾನಿಕ ಸ್ಕ್ಯಾನಿಂಗ್‌ಗೆ ಒಯ್ಯಲು ಅಧಿಕಾರಿಗಳು ಮುಂದಾದಾಗ ಸಂಬಂಧಿಕರು ಶವಾಗಾರದ ಬಾಗಿಲಲ್ಲೇ ಶವದ ವಾಹನ ತಡೆದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ವಾಪಸ್ ಶವಾಗಾರಕ್ಕೆ ಕಳುಹಿಸಲಾಗಿತ್ತು. ಆದರೆ, ನಂತರ ಕೇವಲ ಪಂಚನಾಮೆ ಪ್ರಕ್ರಿಯೆ ಎಂದು ಹೇಳಿ ಕುಟುಂಬಸ್ಥರಿಂದ ಸಹಿ ಪಡೆದುಕೊಂಡ ಪೊಲೀಸರು, ಅವರಿಗೆ ತಿಳಿಸದೇ ಹಾಗೂ ಯಾವುದೇ ಒಪ್ಪಿಗೆ ಪಡೆಯದೇ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಈ ಕುರಿತು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್, "ನಾವು ಮರಣೋತ್ತರ ಪರೀಕ್ಷೆಗೆ ಸಮ್ಮತಿಯನ್ನೇ ನೀಡಿರಲಿಲ್ಲ. ಆದರೆ ಶವಾಗಾರದ ಒಳಗಿನ ಸ್ಥಿತಿ ನೋಡಿ ಈಗಾಗಲೇ ಎರಡು ಮೃತದೇಹಗಳ ಪೋಸ್ಟ್ ಮಾರ್ಟಮ್ ಮುಗಿದಿರುವುದನ್ನು ನರ್ಸ್ ಆಗಿ ನಾನು ಸ್ಪಷ್ಟವಾಗಿ ಹೇಳಬಲ್ಲೆ. ನಮ್ಮನ್ನು ಶವಗಳ ಮುಂದೆ ನಿಲ್ಲಿಸಿ ಫೋಟೋ ತೆಗೆಯಲು ಮುಂದಾದಾಗ ನಾನು ನಿರಾಕರಿಸಿದೆ. ಅಲ್ಲದೆ ಮೃತದೇಹಗಳನ್ನು ನಿಯಮಾನುಸಾರ ಐಸ್ ಬಾಕ್ಸ್‌ನಲ್ಲಿಯೂ ಇಟ್ಟಿಲ್ಲ" ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮತ್ತು ಜಿಲ್ಲಾಡಳಿತದ ಈ ಮೋಸದ ಆಟದಿಂದ ಮೃತರ ಸಂಬಂಧಿಕರು ತೀವ್ರ ಆಕ್ರೋಶಗೊಂಡಿದ್ದು, ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.