image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಧಾನಸೌಧದ 'ಫ್ರೀಡಂ ಹಬ್ಬ'ದಲ್ಲಿ 'ಮೋದಿ' ಘೋಷಣೆ: ಹಾಸ್ಯಭರಿತವಾಗಿ ತಿರುಗೇಟು ನೀಡಿದ ಸಿಎಂ ಡಿಕೆ ಶಿವಕುಮಾರ್

ವಿಧಾನಸೌಧದ 'ಫ್ರೀಡಂ ಹಬ್ಬ'ದಲ್ಲಿ 'ಮೋದಿ' ಘೋಷಣೆ: ಹಾಸ್ಯಭರಿತವಾಗಿ ತಿರುಗೇಟು ನೀಡಿದ ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಬೆಂಗಳೂರಿನ ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪ್ರಥಮ ಬಾರಿಗೆ ಆಯೋಜಿಸಿದ್ದ 'ಫ್ರೀಡಂ ಹಬ್ಬ' ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು. ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಸಾರ್ವಜನಿಕರಿಂದ 'ಮೋದಿ, ಮೋದಿ' ಎಂಬ ಘೋಷಣೆಗಳು ಕೇಳಿಬಂದವು. ತಕ್ಷಣವೇ ಪರಿಸ್ಥಿತಿಯನ್ನು ತಿಳಿಗೊಳಿಸಿದ ಸಿಎಂ, "ಮೋದಿನೇ ಡಿಕೆ, ಡಿಕೆ ಎನ್ನುತ್ತಿದ್ದಾರೆ, ನೀವು ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದೀರಾ!" ಎಂದು ಸಮಯೋಚಿತ ಹಾಗೂ ಹಾಸ್ಯಭರಿತವಾಗಿ ತಿರುಗೇಟು ನೀಡಿದರು. ಸಿಎಂ ಅವರ ಈ ಸವ್ಯಸಾಚಿ ಮಾತುಗಳಿಗೆ ನೆರೆದಿದ್ದ ಜನಸ್ತೋಮ ತಕ್ಷಣವೇ 'ಡಿಕೆ, ಡಿಕೆ' ಎಂದು ಹರ್ಷೋದ್ಗಾರದ ಘೋಷಣೆ ಕೂಗಿತು.

ಭಾಷಣವನ್ನು ಮುಂದುವರಿಸಿದ ಮುಖ್ಯಮಂತ್ರಿಗಳು, ಫ್ರೀಡಂ ಹಬ್ಬದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಆಗಮಿಸಿದ್ದರೂ ಭದ್ರತಾ ಕಾರಣಗಳಿಂದ ಪ್ರವೇಶವನ್ನು ಸೀಮಿತಗೊಳಿಸಬೇಕಾಯಿತು ಎಂದು ತಿಳಿಸಿ ಸಾರ್ವಜನಿಕರಲ್ಲಿ ಕ್ಷಮೆ ಕೋರಿದರು. ಮುಂಬರುವ ಡಿಸೆಂಬರ್‌ನಲ್ಲಿ ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ 'ಬೆಂಗಳೂರು ಹಬ್ಬ'ವನ್ನು ಆಯೋಜಿಸುವುದಾಗಿ ಹಾಗೂ ಮುಂದಿನ ಆವೃತ್ತಿಯ ಫ್ರೀಡಂ ಹಬ್ಬದಲ್ಲಿ ಹೆಚ್ಚಿನ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಸಂಭ್ರಮದ ಭಾಗವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಗಲ ಮೇಲೆ ತ್ರಿವರ್ಣ ಧ್ವಜ ಹೊತ್ತು ಶುಶ್ರೂಷಕಿಯರ ಪಡೆ, ಸ್ತ್ರೀ ಜಾಗೃತಿ ಸಮಿತಿ ಹಾಗೂ ತ್ಯಾಜ್ಯ ಶ್ರಮಿಕರ ಸಂಘದ ಮಹಿಳೆಯರೊಂದಿಗೆ ಪರೇಡ್‌ನಲ್ಲಿ ಹೆಜ್ಜೆ ಹಾಕಿದರು. ರಾಜ್ಯದ ನಾನಾ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟದ ಕೊಡುಗೆಗಳನ್ನು ಸಾರುವ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಛದ್ಮವೇಷಧಾರಿಗಳು ಮತ್ತು ಮಕ್ಕಳೊಂದಿಗೆ ಫೋಟೊ ತೆಗೆಸಿಕೊಂಡರು. ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಭಾಗವಹಿಸಿದ್ದ ಈ ವರ್ಣರಂಜಿತ ಹಬ್ಬವು ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕ ಪರೇಡ್, ಸಾಂಪ್ರದಾಯಿಕ ಕಲಾ ಪ್ರದರ್ಶನಗಳು, ಸಂಗೀತ ಕಛೇರಿ ಹಾಗೂ ಅದ್ಧೂರಿ ಬಾಣಬಿರುಸುಗಳ ಪ್ರದರ್ಶನದೊಂದಿಗೆ ಮುಕ್ತಾಯವಾಯಿತು.

Category
ಕರಾವಳಿ ತರಂಗಿಣಿ