image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೆಪಿಎಸ್‌ಸಿ ನೇಮಕಾತಿಯಲ್ಲಿ ಯುಪಿಎಸ್‌ಸಿ ಮಾದರಿ : 3-5 ತಿಂಗಳಲ್ಲಿ ಆಯ್ಕೆ

ಕೆಪಿಎಸ್‌ಸಿ ನೇಮಕಾತಿಯಲ್ಲಿ ಯುಪಿಎಸ್‌ಸಿ ಮಾದರಿ : 3-5 ತಿಂಗಳಲ್ಲಿ ಆಯ್ಕೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಗಳನ್ನು ಹೆಚ್ಚು ಪಾರದರ್ಶಕ, ತಂತ್ರಜ್ಞಾನಾಧಾರಿತ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚಿಗೆ ನಡೆದ ಆಯೋಗದ ಸಭೆಯಲ್ಲಿ ನೂತನ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಮುಂದಿನ ದಿನಗಳಲ್ಲಿ ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ನೇಮಕಾತಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನೂತನ ಪರೀಕ್ಷಾ ನಿಯಂತ್ರಕ ಹೆಚ್. ಪ್ರಸನ್ನ ಅವರು, ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕೇವಲ 3 ರಿಂದ 5 ತಿಂಗಳ ಅವಧಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುವ ಯೋಜನೆಯನ್ನು ಸಭೆಯಲ್ಲಿ ವಿವರಿಸಿದರು.

ನೇಮಕಾತಿ ಪರೀಕ್ಷೆಗಳು ಪೂರ್ಣಗೊಂಡ ಕೂಡಲೇ ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ OMR ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಅಭ್ಯರ್ಥಿಗಳು ತಮ್ಮ OMR ಉತ್ತರ ಪತ್ರಿಕೆಗಳನ್ನು ಸ್ವತಃ ಪರಿಶೀಲಿಸಲು ಅನುಕೂಲವಾಗಲಿದ್ದು, ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು. ಈ ಹೊಸ ವ್ಯವಸ್ಥೆಗೆ ಆಯೋಗದ ಸದಸ್ಯರು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ, ಸರ್ಕಾರಿ ಉದ್ಯೋಗದ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಅಥವಾ ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗದೆ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಆಯೋಗ ಮನವಿ ಮಾಡಿದೆ. ದಲ್ಲಾಳಿಗಳ ಅಥವಾ ಅನಧಿಕೃತ ವ್ಯಕ್ತಿಗಳ ಭರವಸೆಗಳಿಗೆ ಬಲಿಯಾಗದೆ ನೇರ ಸಿದ್ಧತೆ ನಡೆಸಿ ಸರ್ಕಾರದ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

Category
ಕರಾವಳಿ ತರಂಗಿಣಿ