image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

80ನೇ ಸ್ವಾತಂತ್ರ್ಯೋತ್ಸವ: ಅಭಿವೃದ್ಧಿಯ ಹೊಸ ಪರ್ವಕ್ಕೆ ಸಿಎಂ ಡಿಕೆಶಿ ಮಹತ್ವದ ಘೋಷಣೆಗಳು

80ನೇ ಸ್ವಾತಂತ್ರ್ಯೋತ್ಸವ: ಅಭಿವೃದ್ಧಿಯ ಹೊಸ ಪರ್ವಕ್ಕೆ ಸಿಎಂ ಡಿಕೆಶಿ ಮಹತ್ವದ ಘೋಷಣೆಗಳು

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ಮತ್ತು ಕ್ರಾಂತಿಕಾರಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಬೃಹತ್ ಗುರಿಯೊಂದಿಗೆ, ಶಿಕ್ಷಣ, ಉದ್ಯೋಗ, ಕೃಷಿ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಹೊಸ ಸಂಚಲನ ಮೂಡಿಸಲು ಸರ್ಕಾರ ಮುಂದಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಐ ಶಿಕ್ಷಣವನ್ನು ಪರಿಚಯಿಸಲಾಗುವುದು. ‘ಎಐ ಅಕ್ಷರ ಅಭಿಯಾನ’ ಹಾಗೂ ‘ಕೋಡಿಂಗ್ ಗುರುಕುಲ’ ಯೋಜನೆಗಳನ್ನು ಆರಂಭಿಸಲಿದ್ದು, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಮತ್ತು ರಾಜ್ಯದ ವಿವಿಧೆಡೆ ಎಐ ಹಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5 ಮೀಸಲಾತಿ ಕಲ್ಪಿಸುವ ‘ಸಹಾಯ ಹಸ್ತ’ ಯೋಜನೆಯನ್ನೂ ಪ್ರಕಟಿಸಲಾಗಿದೆ.

ಯುವಜನತೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ಸರ್ಕಾರ, ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’, ‘ಯುವ ಉದ್ಯೋಗ ಸೇತು’ ಮತ್ತು ‘ಉದ್ಯೋಗ ನಿಧಿ’ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡಲು ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ ನೀಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಸರ್ಕಾರಿ ವಲಯದ 72,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ ಆರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು.

ರೈತರ ಏಳಿಗೆಗಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಹಾಗೂ ‘ರೈತ ಮಿತ್ರ’ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಡ್ರೋನ್ ಹಾಗೂ ಉಪಗ್ರಹಗಳ ಮೂಲಕ ನೈಜ ಸಮಯದ ಬೆಳೆ ಸಮೀಕ್ಷೆ ಮಾಹಿತಿ ನೀಡಲಾಗುವುದು. 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಉದ್ಯಮ ರಂಗಕ್ಕೆ ಉತ್ತೇಜನ ನೀಡಲು ದೊಡ್ಡಬಳ್ಳಾಪುರದಲ್ಲಿ ₹20,000 ಕೋಟಿ ಹೂಡಿಕೆಯೊಂದಿಗೆ 1 ಲಕ್ಷ ಉದ್ಯೋಗ ಸೃಷ್ಟಿಸುವ ‘ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ಸ್ಥಾಪಿಸಲಾಗುವುದು ಹಾಗೂ ‘ಬಿಯಾಂಡ್ ಬೆಂಗಳೂರು’ ಅಡಿಯಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸಲಾಗುವುದು.

ನಗರ ಅಭಿವೃದ್ಧಿ ಮತ್ತು ಸಂಚಾರ ಸುಧಾರಣೆಗೆ ಸಂಬಂಧಿಸಿದಂತೆ, 117 ಕಿ.ಮೀ. ಉದ್ದದ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ರಿಂಗ್ ರಸ್ತೆ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ನಗರ-ಪಟ್ಟಣಗಳಲ್ಲಿ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನಲ್ಲಿ ಐದು ಹೊಸ ಕಮಿಷನರೇಟ್‌ಗಳು, ರೌಡಿ ನಿಗ್ರಹ ಪಡೆ, ಐದು ಬೃಹತ್ ವೃಕ್ಷೋದ್ಯಾನಗಳು ಹಾಗೂ ಏಳು ಪ್ರಮುಖ ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ಆಸ್ತಿ ಮಾಲೀಕತ್ವದ ಗೊಂದಲಗಳಿಗೆ ಭೂ-ಗ್ಯಾರಂಟಿ ಮತ್ತು ಇ-ಖಾತಾ ವ್ಯವಸ್ಥೆಯ ಮೂಲಕ ಶಾಶ್ವತ ಪರಿಹಾರ ಒದಗಿಸಲಾಗುವುದು.

ಇದಲ್ಲದೆ, ಬಹುವರ್ಷಗಳ ಬೇಡಿಕೆಯಾದ ಮೇಕೆದಾಟು ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಲಾಗಿದ್ದು, 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16,000 ಕೋಟಿ ಅನುಮೋದನೆ ನೀಡಲಾಗಿದೆ. ವಾಹನ ಮಾಲೀಕರಿಗಾಗಿ ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಹಾಗೂ ಸಾರ್ವಜನಿಕರ ದೂರು-ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ