ಬೆಂಗಳೂರು: 2024ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಐವರು ಸಾಧಕರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರು ವಿಭಾಗ: ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ ಗಡ್ಡದಾರಹಟ್ಟಿ - ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾದ ಇವರು ಕಿಲಾರಿ (ಜಾನುವಾರುಗಳ ಸಂರಕ್ಷಣೆ) ವೃತ್ತಿಯ ಮೂಲಕ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು ವಿಭಾಗ: ಡಾ.ರತ್ನಮ್ಮ ಎಸ್. - ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯವರಾದ ಡಾ.ರತ್ನಮ್ಮ ಎಸ್. ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ್ದಾರೆ.
ಬೆಳಗಾವಿ ವಿಭಾಗ: ರಾಜಶೇಖರ ತಳವಾರ - ಬೆಳಗಾವಿಯ ಗಾಂಧಿನಗರದವರಾದ ಇವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು ಕೇಂದ್ರ: ಕೆ.ಎಸ್.ಮೃತ್ಯುಂಜಯ - ಬೆಂಗಳೂರು ವಾಸಿಯಾದ ಕೆ.ಎಸ್.ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡದ ಸಮುದಾಯದ ಶೈಕ್ಷಣಿಕ, ಆರ್ಥಿಕ ಆಭಿವೃದ್ಧಿ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮುದಾಯದವರಿಗೆ ದೊರಕಿಸಲು ಶ್ರಮಿಸಿದ್ದಾರೆ.
ಕಲಬುರಗಿ ವಿಭಾಗ: ರತ್ನಮ್ಮ ಬಿ. ಸೋಗಿ - ವಿಜಯನಗರ ಜಿಲ್ಲೆ ಹರಪನಹಳ್ಳಿಯವರಾದ ಇವರು ವೃತ್ತಿ ರಂಗಭೂಮಿ ಖ್ಯಾತ ಕಲಾವಿದರಾಗಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದರಾಗಿದ್ದಾರೆ.
2024ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಇವರ ಸ್ಮರಣಾರ್ಥ ನೀಡುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಆಯ್ಕೆ ಮಾಡಲು ಕೆ.ಹೆಚ್.ಮ್ಲಲೇಶಪ್ಪ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಗಣ್ಯರನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.