image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿಕ್ಕಮಗಳೂರಿನಲ್ಲಿ 100 ಮೀಟರ್ ತ್ರಿವರ್ಣ ಧ್ವಜ ಯಾತ್ರೆ

ಚಿಕ್ಕಮಗಳೂರಿನಲ್ಲಿ 100 ಮೀಟರ್ ತ್ರಿವರ್ಣ ಧ್ವಜ ಯಾತ್ರೆ

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶಭಕ್ತರ ಬಳಗದ ವತಿಯಿಂದ ಆಯೋಜಿಸಲಾಗಿದ್ದ 100 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜ ಯಾತ್ರೆಯು ದೇಶಭಕ್ತಿ ಹಾಗೂ ರಾಷ್ಟ್ರೀಯ ಭಾವೈಕ್ಯತೆಯ ಜಾಗೃತಿಯನ್ನು ಸಾರಿತು. ತಾಲ್ಲೂಕು ಕಚೇರಿ ಆವರಣದಿಂದ ಆರಂಭಗೊಂಡ ಈ ಮೆರವಣಿಗೆಯು ಎಂ.ಜಿ. ರಸ್ತೆಯ ಮೂಲಕ ಸಾಗಿ ಆಜಾದ್ ಪಾರ್ಕ್‌ನಲ್ಲಿ ಯಶಸ್ವಿಯಾಗಿ ಸಮಾವೇಶಗೊಂಡಿತು.

ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು, ಪ್ರತಿಯೊಬ್ಬ ಭಾರತೀಯನಿಗೂ ರಾಷ್ಟ್ರಧ್ವಜವೇ ಅತ್ಯಂತ ಶ್ರೇಷ್ಠವಾದದ್ದು ಹಾಗೂ ಇಡೀ ದೇಶವನ್ನು ಪ್ರತಿನಿಧಿಸುವ ಒಂದೇ ಧ್ವಜವೆಂದರೆ ಅದು ತ್ರಿವರ್ಣ ಧ್ವಜ ಎಂದು ಪ್ರತಿಪಾದಿಸಿದರು. ವಿವಿಧ ಪಕ್ಷಗಳು, ಸಂಘಟನೆಗಳು ಅಥವಾ ಸಮುದಾಯಗಳು ತಮ್ಮದೇ ಧ್ವಜಗಳನ್ನು ಹೊಂದಿರಬಹುದಾದರೂ, ರಾಷ್ಟ್ರಧ್ವಜಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಎಂದರು. ಭಾರತದ ಸಂವಿಧಾನವೇ ದೇಶದ ಪರಮ ಕಾನೂನಾಗಿದ್ದು, 140 ಕೋಟಿಗೂ ಅಧಿಕ ಜನರನ್ನು ಒಂದೇ ಚೌಕಟ್ಟಿನಲ್ಲಿ ಜೋಡಿಸುವ ಶಕ್ತಿಯಾಗಿದೆ ಎಂದು ತಿಳಿಸಿದ ಅವರು, ರಾಷ್ಟ್ರಗೀತೆಯ ಬಗ್ಗೆ ಅಸಹ್ಯವಾಗಿ ಮಾತನಾಡುವ ಮನೋಭಾವವು ದೇಶಭಕ್ತಿಯ ಕುರಿತು ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದರು.

ಭಾರತೀಯ ಸೇನೆಯ ಪರಾಕ್ರಮವನ್ನು ಸ್ಮರಿಸಿದ ಸಿ.ಟಿ. ರವಿ, 1948, 1965, 1971ರ ಯುದ್ಧಗಳು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ಸಾಹಸವು ಐತಿಹಾಸಿಕವಾದದ್ದು ಎಂದರು. ಕಾರ್ಗಿಲ್ ಸಮರದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ "ದಿಲ್ ಮಾಂಗೇ ಮೋರ್" ಎಂಬ ಉದ್ಘೋಷವು ಭಾರತೀಯ ಸೈನಿಕರ ಅಜೇಯ ಮನೋಭಾವದ ಸಂಕೇತವಾಗಿದೆ. ಇಂದಿನ ದಿನಗಳಲ್ಲಿ ಯುದ್ಧದ ಸ್ವರೂಪ ಬದಲಾಗಿದ್ದು, ಸೈಬರ್ ಯುದ್ಧ, ಮಾಹಿತಿ ಸಮರ, ಸುಳ್ಳು ಸುದ್ದಿಗಳು, ಆರ್ಥಿಕ ಒತ್ತಡ ಹಾಗೂ ಜನಸಂಖ್ಯಾ ಬದಲಾವಣೆಗಳ ಮೂಲಕ ದೇಶದ ಆಂತರಿಕ ಸ್ಥಿರತೆಯನ್ನು ಕದಡುವ ಯತ್ನಗಳ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.

ದೇಶದ ಭದ್ರತೆ ಮತ್ತು ಅಭಿವೃದ್ಧಿ ಕೇವಲ ಸರ್ಕಾರದ ಮೇಲಷ್ಟೇ ಅಲ್ಲ, ನಾಗರಿಕರ ಜವಾಬ್ದಾರಿಯ ಮೇಲೆಯೂ ಅವಲಂಬಿತವಾಗಿದೆ. ಜಾತೀಯತೆ, ಅಸ್ಪೃಶ್ಯತೆ, ಬಡತನ, ನಿರುದ್ಯೋಗ ಹಾಗೂ ಭ್ರಷ್ಟಾಚಾರ ಮುಕ್ತ 'ವಿಕಸಿತ ಭಾರತ' ನಿರ್ಮಾಣಕ್ಕೆ ಸಾಮಾಜಿಕ ಸಾಮರಸ್ಯ ಅಗತ್ಯ. ಸ್ವಾತಂತ್ರ್ಯಪೂರ್ವದಲ್ಲಿ ಜೋಗೇಂದ್ರನಾಥ ಮಂಡಲ್ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಜಿನ್ನಾ ಅವರೊಂದಿಗೆ ಪಾಕಿಸ್ತಾನಕ್ಕೆ ತೆರಳಿ ನಂತರ ನಿರಾಶರಾಗಿ ಭಾರತಕ್ಕೆ ಮರಳಬೇಕಾಯಿತು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯತೆಯ ಚೌಕಟ್ಟಿನಲ್ಲೇ ಸಂವಿಧಾನ ರಚಿಸಿ ತಮ್ಮ ಸಮುದಾಯದ ಹಕ್ಕುಗಳನ್ನು ಕಾಯ್ದುಕೊಂಡರು. ಭಾರತೀಯತೆ ದುರ್ಬಲವಾದರೆ ಸಂವಿಧಾನವೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ರವಿ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ದೇಶಭಕ್ತರ ಬಳಗದ ಸಂಚಾಲಕ ಕೆ.ಎಸ್. ಪುಷ್ಪರಾಜ್, ನಿವೃತ್ತ ಯೋಧ ಮಂಜುನಾಥ್, ಸಿ.ಎಸ್. ಕಲ್ಮರುಡಪ್ಪ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾರವಿ ನಾಯ್ಕ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ