ಬೆಂಗಳೂರು: ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ಆರೋಪಕ್ಕೆ ಬಿಜೆಪಿ ಹಾಗೂ ಚುನಾವಣಾ ಇಲಾಖೆ ತಕ್ಕ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿವೆ. ಬೂತ್ ಮಟ್ಟದ ಅಧಿಕಾರಿ (BLO) ಅವರು ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಗಾರ್ಡನ್ ಅಪಾರ್ಟ್ಮೆಂಟ್ನ ಫ್ಲಾಟ್ ಸಂಖ್ಯೆ 266ಕ್ಕೆ ಮನೆ-ಮನೆ ಪರಿಶೀಲನೆಗೆ ತೆರಳಿದ್ದಾಗ, ನಟ ಪ್ರಕಾಶ್ ರಾಜ್ ಅವರು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಅಪಾರ್ಟ್ಮೆಂಟ್ ಮಾಲೀಕರು ಹಾಗೂ ಆಸ್ತಿ ವ್ಯವಸ್ಥಾಪಕರನ್ನು ವಿಚಾರಿಸಿದಾಗ, ನಟ ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಈ ವಿಳಾಸದಲ್ಲಿ ವಾಸವಾಗಿಲ್ಲ ಹಾಗೂ ಪ್ರಸ್ತುತ ಬೇರೆ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂಬುದು ದೃಢಪಟ್ಟಿದೆ.
ಈ ಕುರಿತು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಕೇಂದ್ರ ನಗರಪಾಲಿಕೆಯ ಆಯುಕ್ತರಾದ ಜಗದೀಶ ಜಿ. ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗಲೂ ತಾವು ನೋಂದಾಯಿತ ಹಳೆಯ ವಿಳಾಸದಲ್ಲಿ ವಾಸವಿಲ್ಲದಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಪ್ರಸ್ತುತ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇರೊಂದು ವಿಳಾಸದಲ್ಲಿ ವಾಸವಿರುವುದಾಗಿ ತಿಳಿಸಿದ್ದಾರೆ.
ಚುನಾವಣಾ ವ್ಯವಸ್ಥೆಯ ನಿಯಮಾವಳಿಗಳ ಪ್ರಕಾರ, ವಾಸಸ್ಥಳ ಅಥವಾ ಕ್ಷೇತ್ರ ಬದಲಾದಾಗ ಹೊಸ ವಿಳಾಸಕ್ಕೆ ಹೆಸರು ನೋಂದಾಯಿಸಲು 'ನಮೂನೆ-6' (Form 6) ಸಲ್ಲಿಸುವುದು ಕಡ್ಡಾಯವಾಗಿದೆ. ಈ ಅರ್ಜಿಯನ್ನು ಆಫ್ಲೈನ್ನಲ್ಲಿ ಬಿಎಲ್ಒ ಮೂಲಕ ಅಥವಾ ಆನ್ಲೈನ್ನಲ್ಲಿ 'Voters Service Portal' ಮೂಲಕ ಉಚಿತವಾಗಿ ಸಲ್ಲಿಸಿ ಮತದಾರರ ಪಟ್ಟಿಯನ್ನು ನವೀಕರಿಸಿಕೊಳ್ಳಬಹುದು. ಹಳೆಯ ವಿಳಾಸದಲ್ಲಿ ವಾಸವಿಲ್ಲದ ಕಾರಣ ಪರಿಶೀಲನೆ ನಡೆಸಿ ಹೆಸರು ಪರಿಷ್ಕರಿಸಲಾಗಿದೆಯೇ ಹೊರತು, ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.