ಬೆಂಗಳೂರು : ಬೆಂಗಳೂರಿನಲ್ಲಿ ಮುಂದುವರಿದ RTO ದಾಳಿ ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಭಾರಿ ಶಾಕ್ ನೀಡಿದೆ. ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶದ ಟ್ಯಾಕ್ಸಿಗಳಾಗಿ ಬಳಸಲು ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸರ್ಕಾರ, ರಸ್ತೆ ಸುರಕ್ಷತೆ ಹಾಗೂ ಪ್ರಯಾಣಿಕರ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಈ ನಿಲುವು ತಳೆದಿರುವುದಾಗಿ ತಿಳಿಸಿದೆ. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಸೂಕ್ತ ಸುರಕ್ಷತೆ ಹಾಗೂ ಅಧಿಕೃತ ವಿಮಾ ರಕ್ಷಣೆ ಇರುವುದಿಲ್ಲ ಮತ್ತು ದ್ವಿಚಕ್ರ ವಾಹನಗಳಲ್ಲಿ ಅಪಘಾತಗಳು ಹಾಗೂ ಸಾವು-ನೋವುಗಳು ಸಂಭವಿಸುವ ಪ್ರಮಾಣ ತೀರಾ ಹೆಚ್ಚಿರುತ್ತದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಅಲ್ಲದೆ, ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ 'ಬೈಕ್ ಟ್ಯಾಕ್ಸಿ' ಎಂಬ ಪದದ ಯಾವುದೇ ಅಧಿಕೃತ ವ್ಯಾಖ್ಯಾನ ಅಥವಾ ನಿಯಮಾವಳಿಗಳೇ ಇಲ್ಲ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟದ ನಡುವೆಯೇ, ಸಾರಿಗೆ ಇಲಾಖೆಯ ಜಾರಿ ವಿಭಾಗದ ಕಾರ್ಯಾಚರಣೆ ಬೆಂಗಳೂರಿನಲ್ಲಿ ಭರ್ಜರಿಯಾಗಿ ಮುಂದುವರಿದಿದೆ. ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.
ವಿಶೇಷವಾಗಿ ಬೆಂಗಳೂರಿನ ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಒಂದೇ ದಿನ ಅಧಿಕಾರಿಗಳು 85ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ಅನಧಿಕೃತ ಸೇವೆಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಒಟ್ಟು 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ನಿನ್ನೆ 256 ಬೈಕ್‌ಗಳನ್ನು ಸೀಜ್ ಮಾಡಲಾಗಿತ್ತು. ಕೇವಲ ಎರಡು ದಿನಗಳಲ್ಲಿ ನೂರಾರು ಬೈಕ್‌ಗಳನ್ನು ಜಪ್ತಿ ಮಾಡುವ ಮೂಲಕ ಸಾರಿಗೆ ಇಲಾಖೆ ಖಡಕ್ ಮುನ್ನೆಚ್ಚರಿಕೆ ರವಾನಿಸಿದೆ.