ಶಿವಮೊಗ್ಗ : ಖಾತೆಯಲ್ಲಿ ಹಣವಿದ್ದರೂ ಆಟೋ ಡೆಬಿಟ್ ಮೂಲಕ ವಿಮಾ ಕಂತು ಪಾವತಿಸಿಕೊಳ್ಳದೆ ಹಾಗೂ ಯಾವುದೇ ಮುನ್ಸೂಚನೆ ನೀಡದೆ ವಿಮಾ ಪಾಲಿಸಿಯನ್ನು ರದ್ದುಗೊಳಿಸಿ ಸೇವಾ ನ್ಯೂನತೆ ಎಸಗಿದ ಕೆನರಾ ಬ್ಯಾಂಕ್ ಮತ್ತು ಕೆನರಾ ಹೆಚ್‌ಎಸ್‌ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗದ ಬಾರಂಗಿ ನಿವಾಸಿ ಸುಮ ಎಂಬುವರು ತಮ್ಮ ದಿವಂಗತ ಪತಿ ನಟರಾಜನಾಯ್ಕ ಅವರ ಪರವಾಗಿ ವಕೀಲರ ಮೂಲಕ ಕೆನರಾ ಬ್ಯಾಂಕ್ ಸೊರಬ ಶಾಖೆಯ ವ್ಯವಸ್ಥಾಪಕರು ಹಾಗೂ ವಿಮಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ನಟರಾಜನಾಯ್ಕ ಅವರು 'ಕೆನರಾ ಜೀವ ಭೀಮಾ ಸ್ಮಾರ್ಟ್ ಸುರಕ್ಷಾ ಪ್ಲಾನ್' ಅಡಿಯಲ್ಲಿ ಪಾಲಿಸಿ ಪಡೆದಿದ್ದು, ವಾರ್ಷಿಕ ಕಂತು 7,854.80 ರೂ. ಅನ್ನು ಆಟೋ ಡೆಬಿಟ್ ಮೂಲಕ ಖಾತೆಯಿಂದ ಜಮಾ ಮಾಡಿಕೊಳ್ಳಬೇಕಾಗಿತ್ತು. 2023ರ ಜನವರಿ 21 ರಂದು ಖಾತೆಯಲ್ಲಿ ಬಾಕಿ ಹಣವಿಲ್ಲದ ಕಾರಣ ಕಂತು ಪಾವತಿಯಾಗಿರಲಿಲ್ಲ. ಆದರೆ ತದನಂತರ ಖಾತೆಗೆ ವೇತನದ ಹಣ ಜಮೆಯಾಗಿದ್ದರೂ ಬ್ಯಾಂಕಿನವರು ಕಂತಿನ ಹಣವನ್ನು ಡೆಬಿಟ್ ಮಾಡಿಕೊಳ್ಳಲು ವಿಫಲರಾಗಿದ್ದರು. ಈ ನಡುವೆ 2023ರ ಮೇ 24 ರಂದು ನಟರಾಜನಾಯ್ಕ ನಿಧನ ಹೊಂದಿದ್ದು, ದೂರುದಾರರು ವಿಮಾ ಹಣಕ್ಕಾಗಿ ಕೋರಿಕೆ ಸಲ್ಲಿಸಿದಾಗ ನೋಟೀಸ್ ನೀಡದೆಯೇ ಪಾಲಿಸಿ ರದ್ದಾಗಿದೆ ಎಂದು ತಿಳಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು ಬ್ಯಾಂಕ್ ಮತ್ತು ವಿಮಾ ಸಂಸ್ಥೆಯಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಪಾಲಿಸಿಯ ಫಲವತ್ತತೆಯ ಮೊತ್ತ 20,00,000 ರೂ.ಗಳನ್ನು 2023ರ ಜುಲೈ 4 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು ಹಾಗೂ ತಪ್ಪಿದ್ದಲ್ಲಿ ಶೇ. 10 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ದೂರುದಾರರಿಗೆ ಉಂಟಾದ ಮಾನಸಿಕ ಕಿರುಕುಳಕ್ಕಾಗಿ 50,000 ರೂ. ದಂಡ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ರೂ. ಪಾವತಿಸುವಂತೆ ಆದೇಶದಲ್ಲಿದೆ.