ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸದ ರಾಶಿ ಕೆಳಭಾಗಕ್ಕೆ ಧಾವಿಸಿಬಂದಿದೆ. ಬೆಟ್ಟದ ತುದಿಯಲ್ಲಿ ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದುದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೆಟ್ಟದ ಕೆಳಭಾಗದಲ್ಲೇ ಪೊಲೀಸ್ ವಸತಿ ಗೃಹಗಳಿದ್ದು, ಕುಸಿತದಿಂದಾಗಿ ದೊಡ್ಡ ಪ್ರಮಾಣದ ಕಸ ಹಾಗೂ ಮಣ್ಣಿನ ಮಿಶ್ರಣ ವಸತಿ ಸಮುಚ್ಚಯದತ್ತ ಕೊಚ್ಚಿಬರುತ್ತಿದೆ. ಇದರಿಂದಾಗಿ ಅಲ್ಲಿ ವಾಸಿಸುತ್ತಿರುವ ಕುಟುಂಬಗಳಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಮಾತನಾಡಿದ ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ, "ಸ್ಥಳದಲ್ಲಿ ಸಂಗ್ರಹವಾಗಿರುವ ಕಸವನ್ನು ತಕ್ಷಣವೇ ತೆರವುಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸಲಿದೆ" ಎಂದು ಎಚ್ಚರಿಸಿದ್ದಾರೆ.
ಇನ್ನೊಂದೆಡೆ, ಭಾರಿ ಮಳೆಯಿಂದಾಗಿ ಮಡಿಕೇರಿಯ ಆಕಾಶವಾಣಿ ಟವರ್ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿತವಾಗಿದೆ. 2018ರ ಮಳೆಗಾಲದಲ್ಲೇ ಆಕಾಶವಾಣಿ ಟವರ್ ಬಳಿ ಬರೆ ಕುಸಿತವಾಗಿದ್ದರಿಂದ, ಈ ಬಾರಿ ಮಳೆಗೆ ಮಣ್ಣು ಜರಿಯದಂತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು. ಆದರೆ ಸುರಿದ ಭಾರಿ ಮಳೆಯಿಂದಾಗಿ ಮಣ್ಣಿನ ತೇವ ಹೆಚ್ಚಾದ ಪರಿಣಾಮ ಮೇಲ್ಭಾಗದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿತಗೊಂಡು, ನಿರ್ಮಿಸಲಾಗಿದ್ದ ತಡೆಗೋಡೆಯೂ ಬರೆಯೊಂದಿಗೆ ಜರಿದು ಬಿದ್ದಿದೆ. ಕಾಮಗಾರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.