ಬೆಂಗಳೂರು: ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಸಂಭವಿಸುವ ಆಕಸ್ಮಿಕ ದುರಂತಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ತನಿಖಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಈ ಕುರಿತು ರಾಜ್ಯದ ಎಲ್ಲಾ 30 ಜಿಲ್ಲೆಗಳ ಜಿಲ್ಲಾ ಕೈಗಾರಿಕಾ ಕೇಂದ್ರಗಳ (DIC) ಜಂಟಿ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಆಯುಕ್ತರು ತುರ್ತು ಸೂಚನೆ ನೀಡಿದ್ದಾರೆ. ಆಗಸ್ಟ್ 5ರಂದು ಯಾದಗಿರಿ ಜಿಲ್ಲೆಯ ಕಡಚೂರು ಕೈಗಾರಿಕಾ ಪ್ರದೇಶದಲ್ಲಿರುವ CIL ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಸಂಭವಿಸಿದ ಭೀಕರ ರಾಸಾಯನಿಕ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಇಲಾಖೆಯು ಕೈಗಾರಿಕಾ ಸುರಕ್ಷತಾ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣಾ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಕೈಗಾರಿಕೆಗಳ ಸ್ಥಾಪನೆಗೂ ಮುನ್ನ ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಪಾಲನೆಯನ್ನು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ಕಾರ್ಖಾನೆಗಳು, ಬಾಯ್ಲರ್‌ಗಳ ತಪಾಸಣೆ, ಕಾರ್ಮಿಕರ ಕನಿಷ್ಠ ವೇತನ, ಉದ್ಯೋಗಿಕ ಸುರಕ್ಷತೆ ಹಾಗೂ ರಾಷ್ಟ್ರೀಯ ಕಟ್ಟಡ ಸಂಹಿತೆ (NBC) ನಿಯಮಗಳ ಪ್ರಕಾರ ಅಗ್ನಿಶಾಮಕ ಸೇವೆಗಳ ಸುರಕ್ಷತಾ ಮಾನದಂಡಗಳನ್ನು ಶಾಸನಬದ್ಧ ಇಲಾಖೆಗಳು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅವಘಡ ನಡೆದಾಗ ನೇರವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೇಲೆಯೇ ದೋಷಾರೋಪ ಬರುವುದು ಕಂಡುಬರುತ್ತಿದೆ. ಹೀಗಾಗಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಏಕ ಗವಾಕ್ಷಿ ಸಮಿತಿ ಸಭೆಗಳಲ್ಲಿ ಎಲ್ಲಾ ಶಾಸನಬದ್ಧ ಇಲಾಖೆಗಳು ಸಮನ್ವಯದೊಂದಿಗೆ ಈ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಬೇಕು. ಜಿಲ್ಲಾ ಕೈಗಾರಿಕಾ ಕೇಂದ್ರದ (DIC) ಜಂಟಿ ನಿರ್ದೇಶಕರು ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಮೂಲಕ ಮೊದಲ ತನಿಖಾ ವರದಿಗಳನ್ನು ಪಡೆದುಕೊಂಡು ಸೂಕ್ತ ಅನುಸರಣಾ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.