ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ನಟ ದರ್ಶನ್ ಆಪ್ತ ಹಾಗೂ ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ತಮ್ಮನ್ನು 'ಮಾಫಿ ಸಾಕ್ಷಿ'ಯನ್ನಾಗಿ (ಅಪ್ರೂವರ್) ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕೋರ್ಟ್ ಮುಂದೆ ಹಂಚಿಕೊಳ್ಳುವುದಾಗಿ ತಿಳಿಸಿರುವ ಅವರು, ಅರ್ಜಿಯಲ್ಲಿ ಹಲವು ಸ್ಪೋಟಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರದೋಷ್ ಸಲ್ಲಿಸಿರುವ ಅರ್ಜಿಯ ಪ್ರಕಾರ, ಕೊಲೆ ನಡೆದ ಬಳಿಕ ನಟ ದರ್ಶನ್ ತಮಗೆ ಗನ್‌ನಿಂದ ಶೂಟ್ ಮಾಡಿಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ್ದರು. ತಮಗೆ ಸಹಕರಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್ ಹೆದರಿಸಿದ್ದರಿಂದಲೇ ತಾವು ಅವರಿಗೆ ಸಹಾಯ ಮಾಡಿದ್ದಾಗಿ ಪ್ರದೋಷ್ ಹೇಳಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದಾಗ, ಸಿಗರೇಟಿನಿಂದ ಸುಟ್ಟಾಗ ಹಾಗೂ ಖುದ್ದು ದರ್ಶನ್ ತೀವ್ರವಾಗಿ ಹಲ್ಲೆ ಮಾಡಿದಾಗ ತಾವು ಸ್ಥಳದಲ್ಲೇ ಹಾಜರಿದ್ದು, ಹಲ್ಲೆ ತಡೆಯಲು ಬಹಳ ಪ್ರಯತ್ನ ಪಟ್ಟಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ದರ್ಶನ್ ಹಾಕಿದ ಬೆದರಿಕೆಯಿಂದಾಗಿ ತಾವು ಅಸಹಾಯಕರಾಗಿದ್ದಾಗಿ ತಿಳಿಸಿದ್ದಾರೆ.
ಪ್ರಕರಣ ನಡೆದಿದ್ದು ಹೇಗೆ ಮತ್ತು ಯಾರ್ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಎಲ್ಲಾ ವಿವರಗಳು ತಮಗೆ ತಿಳಿದಿದ್ದು, ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದರೆ ಪ್ರತಿಯೊಂದು ವಿಷಯವನ್ನೂ ನ್ಯಾಯಾಲಯದ ಮುಂದೆ ಹೇಳುವುದಾಗಿ ಪ್ರದೋಷ್ ಮನವಿ ಮಾಡಿದ್ದಾರೆ. ಪ್ರಸ್ತುತ ಈ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ಆಗಸ್ಟ್ 10 ರಂದೂ ಕೂಡ ವಿಚಾರಣೆ ಮುಂದುವರಿಯಲಿದೆ.