image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆಗಸ್ಟ್ 10ರಿಂದ ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ಕಾರ್ಯಾರಂಭ

ಆಗಸ್ಟ್ 10ರಿಂದ ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ಕಾರ್ಯಾರಂಭ

ಬೆಂಗಳೂರು : ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆಗಸ್ಟ್ 13ರಿಂದ 27ರವರೆಗೆ ಒಟ್ಟು 10 ದಿನಗಳ ಕಾಲ ನಡೆಯಲಿರುವ ಮಳೆಗಾಲದ ವಿಧಾನಸಭಾ ಅಧಿವೇಶನವನ್ನು ಅವರು ನಡೆಸಿಕೊಡಲಿದ್ದು, ಸೋಮವಾರ ವಿಧಾನಸಭಾ ಅಧ್ಯಕ್ಷರ ಕಚೇರಿಗೆ ತೆರಳಿ ಕಾರ್ಯಾರಂಭ ಮಾಡಲಿದ್ದಾರೆ. 16ನೇ ವಿಧಾನಸಭೆಯ ಎಂಟನೇ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಸಿದ್ಧತೆಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಅಧಿವೇಶನದ ಮೊದಲ ದಿನವಾದ ಗುರುವಾರ, ಇತ್ತೀಚೆಗೆ ಅಗಲಿದ ಗಣ್ಯರಾದ ಮಾಜಿ ಸಚಿವ ಡಿ. ಸುಧಾಕರ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಸೇರಿದಂತೆ ಪ್ರಮುಖರಿಗೆ ಸಂತಾಪ ಸೂಚಿಸಲಾಗುತ್ತದೆ. ಶುಕ್ರವಾರದಿಂದ ನಿಗದಿತ ವೇಳಾಪಟ್ಟಿಯಂತೆ ಕಲಾಪಗಳು ಮುಂದುವರಿಯಲಿವೆ.

ಅಧಿವೇಶನ ಆರಂಭಕ್ಕೂ ಮುನ್ನ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ 12 ಶಾಸಕರು ಸಚಿವರಾಗಿದ್ದರು. ತದನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಸೇರ್ಪಡೆಯಾದ 19 ಸಚಿವರಿಗೆ ಖಾತೆ ಹಂಚಿಕೆ ಬಾಕಿ ಇದ್ದು, ಸದನ ಪ್ರಾರಂಭವಾಗುವ ಮುನ್ನವೇ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ನೂತನ ವಿಧೇಯಕಗಳ ಮಂಡನೆ, ವಿಧಾನಸಭಾ ಅಧ್ಯಕ್ಷರ ನೇಮಕಕ್ಕೆ ಚುನಾವಣಾ ಪ್ರಸ್ತಾವ, ಅರ್ಧ ಗಂಟೆ ಕಾಲಾವಧಿ ಚರ್ಚೆ, ಶೂನ್ಯ ವೇಳೆ, ನಿಯಮ 69ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಚರ್ಚೆ ಹಾಗೂ ಅಧಿಕೃತ ನಿರ್ಣಯಗಳ ಮಂಡನೆಯ ಕಾರ್ಯಕಲಾಪಗಳ ಪಟ್ಟಿಯನ್ನು ಸಿದ್ಧಪಡಿಸಲು ಜಯಚಂದ್ರ ಅವರು ಗಮನ ಹರಿಸಲಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬದಿಂದ ಎದುರಾಗಿರುವ ಬರ ಪರಿಸ್ಥಿತಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವಿಕೆ ಹಾಗೂ ಬಿಡದಿ ಟೌನ್‌ಷಿಪ್ ವಿಷಯಗಳು ಈ ಬಾರಿಯ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆಯಿದೆ. 1978ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಟಿ.ಬಿ. ಜಯಚಂದ್ರ ಅವರು, ಒಟ್ಟು 7 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ, ವಿಧಾನಸಭೆಯ ಉಪನಾಯಕರಾಗಿ ಮತ್ತು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸುದೀರ್ಘ ಸಂಸದೀಯ ಅನುಭವ ಹೊಂದಿದ್ದಾರೆ.

Category
ಕರಾವಳಿ ತರಂಗಿಣಿ