image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಲಸಿಗರ ವಿಚಾರದಲ್ಲಿ 'ವಿಜಿಲಾಂಟಿಸಂ' ಸಹಿಸುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ವಲಸಿಗರ ವಿಚಾರದಲ್ಲಿ 'ವಿಜಿಲಾಂಟಿಸಂ' ಸಹಿಸುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ವಲಸಿಗರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊ ಪೋಸ್ಟ್ ಮಾಡುವುದು ಹಾಗೂ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಇಂತಹ ‘ವಿಜಿಲಾಂಟಿಸಂ’ ಅಥವಾ ‘ಮಾರಲ್ ಪೋಲಿಸಿಂಗ್’ ಕೃತ್ಯಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಖಾಸಗಿ ವ್ಯಕ್ತಿಗಳು ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಜಾಲಗಳು ಜಾಗೃತಗೊಳ್ಳುತ್ತವೆ. ಇದರಿಂದಾಗಿ ಅಕ್ರಮ ನುಸುಳುಕೋರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಕೈಗೊಳ್ಳುವ ರಹಸ್ಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ. ನಿಜವಾದ ದೇಶಭಕ್ತರು ಮತ್ತು ರಾಜ್ಯದ ಹಿತ ಬಯಸುವವರು ಅಕ್ರಮ ವಲಸಿಗರ ಕುರಿತು ಯಾವುದೇ ಮಾಹಿತಿ ಇದ್ದರೆ, ಅದನ್ನು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಅಕ್ರಮವಾಗಿ ಬಂದಿರುವ ಸುಮಾರು 1,000 ವಲಸಿಗರನ್ನು ಸರ್ಕಾರ ಪತ್ತೆ ಹಚ್ಚಿದ್ದು, ಅವರನ್ನು ವಿದೇಶಿಯರ ನೋಂದಣಿ ಕಚೇರಿಗೆ (FRO) ಹಸ್ತಾಂತರಿಸಲಾಗಿದೆ. ಗಡಿ ಭದ್ರತಾ ಪಡೆ (BSF) ಹಾಗೂ ಎಫ್‌ಆರ್‌ಒ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಜ್ಯ ಸರ್ಕಾರ, ಈ ವಿಷಯದಲ್ಲಿ ಶೇಕಡಾ 100ರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಇಂತಹ ಪ್ರಚಾರಪ್ರಿಯ ಕೃತ್ಯಗಳು ಭದ್ರತೆಗೆ ಧಕ್ಕೆ ತರುತ್ತವೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ