image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಲ್ಲಿ 1,909 ಶಂಕಿತ ವಲಸಿಗರು ವಶಕ್ಕೆ, 15 ಮಂದಿ ಬಾಂಗ್ಲಾದೇಶಿಯರು ಎಂದು ದೃಢ

ಬೆಂಗಳೂರಿನಲ್ಲಿ 1,909 ಶಂಕಿತ ವಲಸಿಗರು ವಶಕ್ಕೆ, 15 ಮಂದಿ ಬಾಂಗ್ಲಾದೇಶಿಯರು ಎಂದು ದೃಢ

ಬೆಂಗಳೂರು : ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಗಡಿ ಭಾಗಗಳಲ್ಲಿ ಕಾರ್ಯಾಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಇತ್ತೀಚೆಗೆ ರಾಜ್ಯ ಹೈಕೋರ್ಟ್ ಕೂಡ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ ವಿಶೇಷ ವಲಸಿಗರ ಕಾರ್ಯಪಡೆಯನ್ನು ರಚಿಸಿ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಮುಂಜಾನೆ 4 ಗಂಟೆಗೆ ಏಕಕಾಲದಲ್ಲಿ ನಡೆಸಲಾದ ಈ ದಾಳಿಯಲ್ಲಿ 295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 23 ವಿಶೇಷ ಪೊಲೀಸ್ ತಂಡಗಳು 29 ವಿವಿಧ ಸ್ಥಳಗಳ ಮೇಲೆ ಏಕಾಏಕಿ ಶೋಧ ನಡೆಸಿವೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು 1,909 ಶಂಕಿತ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯಲಾದವರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ, ಈ ಪೈಕಿ 15 ಮಂದಿ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಬಾಗೇರ್‌ಹತ್ ಮೂಲದ ಅಕ್ರಮ ವಲಸಿಗರು ಎಂಬುದು ದೃಢಪಟ್ಟಿದೆ. ಇವರು ಭಾರತೀಯ ಗಡಿ ನುಸುಳಿ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿ, ಸ್ಥಳೀಯರ ನೆರವಿನಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಳಾಸ ಹೊಂದಿರುವ ನಕಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ನೆಲೆಸಿದ್ದರು ಎಂಬುದು ತಿಳಿದುಬಂದಿದೆ. ಇವರಿಗೆ ನೆರವು ನೀಡಿದ ಸ್ಥಳೀಯರ ಕುರಿತೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಳಿದ 1,894 ಶಂಕಿತ ವ್ಯಕ್ತಿಗಳ ವೀಸಾ, ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯತೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಇದೇ ವೇಳೆ, ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದಂತೆ ಎಚ್ಚರಿಕೆ ನೀಡಿರುವ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್, "ಕೆಲವರು ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ವಲಸಿಗರ ಶೆಡ್‌ಗಳ ಮೇಲೆ ದಾಳಿ ನಡೆಸಿ ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ಯಾರಾದರೂ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಎಂಬ ಅನುಮಾನ ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ನೈತಿಕ ಪೊಲೀಸ್‌ಗಿರಿ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ