image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಲಿ: ಡಾ. ಸಿ.ಟಿ. ರವಿ ಕರೆ

ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಲಿ: ಡಾ. ಸಿ.ಟಿ. ರವಿ ಕರೆ

ಚಿಕ್ಕಮಗಳೂರು: ಸಾರ್ವಜನಿಕರ ದೈನಂದಿನ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಕೇವಲ ಸಭೆ-ಸಮಾರಂಭಗಳಿಗೆ ಸೀಮಿತಗೊಳಿಸದೆ, ಜನರ ಬಳಿಗೆ ಕೊಂಡೊಯ್ದು ಜನಾಭಿಪ್ರಾಯ ರೂಪಿಸುವ ಮೂಲಕ ಸಂಘಟಿತ ಹೋರಾಟ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿ 'ಪಾಂಚಜನ್ಯ'ದಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಪ್ರಭಾವ, ಸಾರ್ವಜನಿಕ ಸಮಸ್ಯೆಗಳು ಹಾಗೂ ಸಂಘಟನೆಯ ಚಟುವಟಿಕೆಗಳ ಕುರಿತು ಹೊಸ ರೀತಿಯಲ್ಲಿ ಚಿಂತಿಸಬೇಕು ಎಂದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ತಪ್ಪಿತಸ್ಥರಿಗೆ ₹10 ಕೋಟಿವರೆಗೆ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯ ಕಠಿಣ ಕಾನೂನು ತಂದಿದೆ. ಇದೇ ವೇಳೆ, ರಾಜ್ಯದಲ್ಲಿ ಕೆಪಿಎಸ್‌ಸಿ ಹಾಗೂ ಇತರ ನೇಮಕಾತಿ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧವೂ ಸಮಾನವಾಗಿ ಧ್ವನಿ ಎತ್ತಬೇಕಿದ್ದು, ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.

ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದ ವಿಭಾಗ ಪ್ರಭಾರಿ ಸಿದ್ದರಾಮಣ್ಣ ಮಾತನಾಡಿ, ಪಾರದರ್ಶಕ ಚುನಾವಣೆಗಾಗಿ ನಡೆಯುತ್ತಿರುವ ಮತದಾರರ ಪಟ್ಟಿ ಶುದ್ಧೀಕರಣ (SIR) ಕಾರ್ಯದಲ್ಲಿ ಬಿಎಲ್‌ಒ ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಬೂತ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಮಾಜಿ ಸಚಿವ ಡಿ.ಎನ್. ಜೀವರಾಜ್ ಮಾತನಾಡಿ, ಕಳಸ, ಶೃಂಗೇರಿ, ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ರಸ್ತೆಗಳು ನಿರ್ವಹಣೆ ಕೊರತೆಯಿಂದ ದುಸ್ಥಿತಿಯಲ್ಲಿದ್ದು ಸಂಚಾರ ಕಷ್ಟಕರವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ, ಉಪಾಧ್ಯಕ್ಷೆ ಚೈತ್ರಾ, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಡಾ. ನರೇಂದ್ರ, ಪುಣ್ಯಪಾಲ್ ಹಾಗೂ ಪ್ರಭಾರಿ ಸಚಿನ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಮಂಡಲಗಳ ಅಧ್ಯಕ್ಷರು ಕಳೆದ ತಿಂಗಳು ನಡೆಸಿದ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು.

Category
ಕರಾವಳಿ ತರಂಗಿಣಿ