ಶಿವಮೊಗ್ಗ : ಶಾಲೆ ತೊರೆದ ಹಾಗೂ ಶಾಲಾ-ಕಾಲೇಜಿಗೆ ಸತತವಾಗಿ ಗೈರಾಗುವ ಹೆಣ್ಣುಮಕ್ಕಳ ಮೇಲೆ ನಿಗಾ ವಹಿಸಿ, ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡುವ ಮತ್ತು ನೆರವಾಗುವವರ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಸಭೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಸಹಾಯವಾಣಿ 1098 ಮತ್ತು 112 ಕುರಿತು ಜಾಗೃತಿ ಮೂಡಿಸಬೇಕು. ಮನೆ ತೊರೆದು ಹೋಗುವ ಪ್ರಕರಣಗಳ ಮೇಲೆ ವಿಶೇಷ ನಿಗಾ ಇಡಬೇಕು ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ್, ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜೂನ್‌ವರೆಗೆ 61 ಪೋಕ್ಸೋ ಹಾಗೂ 18 ಬಾಲ್ಯ ವಿವಾಹ ಸೇರಿ ಒಟ್ಟು 79 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 12 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದ್ದು, 23 ಬಾಲ ಗರ್ಭಿಣಿಯರ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮ ವಹಿಸಲಾಗಿದೆ ಎಂದರು. ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಮಾತನಾಡಿ, ಜಿಲ್ಲೆಯ 2,563 ಅಂಗನವಾಡಿಗಳ ಪೈಕಿ ಸ್ವಂತ ಕಟ್ಟಡವಿಲ್ಲದ 237 ಕೇಂದ್ರಗಳಿಗೆ ಕಂದಾಯ ಇಲಾಖೆ ಸಮನ್ವಯದೊಂದಿಗೆ ಜಾಗ ಗುರುತಿಸಲು ಸೂಚಿಸಿದರು. ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ನಿರ್ದೇಶಿಸಿದರು. ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 52 ಮಕ್ಕಳಿಗೆ ಎನ್‌ಆರ್‌ಸಿಯಲ್ಲಿ ಚಿಕಿತ್ಸೆ ಕೊಡಿಸುವುದು ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ಮೂರು ದಿನಕ್ಕೊಮ್ಮೆ ಮನೆಗೆ ಭೇಟಿ ನೀಡಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ವರದಕ್ಷಿಣೆ ನಿಷೇಧ, ಅನೈತಿಕ ಸಾಗಾಣಿಕೆ ತಡೆಗೆ ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿಗಳ ಬಲವರ್ಧನೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಹಾಗೂ ಸಖಿ ಒನ್ ಸ್ಟಾಪ್ ಕೇಂದ್ರಗಳ ನಿರ್ವಹಣೆ ಕುರಿತು ಸಭೆಯಲ್ಲಿ ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.