image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆನ್ ಲೈನ್ ನಲ್ಲಿ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಆನ್ ಲೈನ್ ನಲ್ಲಿ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ಮುಂದೆ ತಮ್ಮ ಚರಾಸ್ತಿ, ಸ್ಥಿರಾಸ್ತಿ ಹಾಗೂ ಹೊಣೆಗಾರಿಕೆಗಳ (Debt) ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ದಾಖಲಿಸಬೇಕೆಂದು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ವಿವರ ಅಪ್‌ಲೋಡ್ ಮಾಡಲು 'ಕರ್ನಾಟಕ ಇ-ಪಿಎಆರ್' (e-PAR) ಅಪ್ಲಿಕೇಶನ್‌ನಲ್ಲಿ 'ಐಪಿಆರ್ ಮಾಡ್ಯೂಲ್' (IPR Module) ಅನ್ನು ಸಿದ್ಧಪಡಿಸಿದೆ.

ದಿನಾಂಕ 20 ಆಗಸ್ಟ್ 2026 ರಿಂದ ಈ ಇ-ಪಿಎಆರ್ ಆನ್‌ಲೈನ್ ವ್ಯವಸ್ಥೆಯು ಅಧಿಕೃತವಾಗಿ ಜಾರಿಗೆ ಬರಲಿದ್ದು, ನೌಕರರು ತಮ್ಮ 2025-26ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಆಗಸ್ಟ್ 20 ರಿಂದಲೇ ಈ ನೂತನ ಪೋರ್ಟಲ್‌ನಲ್ಲಿ ದಾಖಲಿಸಬೇಕಾಗುತ್ತದೆ. ಮುಂದಿನ ವರ್ಷಗಳಿಂದ ಪ್ರತಿ ವರ್ಷ ಮಾರ್ಚ್ ಅಂತ್ಯದ ವೇಳೆಗೆ ನಿಗದಿತ ಆಸ್ತಿ ವಿವರಗಳನ್ನು ಈ ಆನ್‌ಲೈನ್ ಮಾಡ್ಯೂಲ್‌ನಲ್ಲೇ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.

ಇಲ್ಲಿಯವರೆಗೆ 1994ರ ಅಧಿಕೃತ ಜ್ಞಾಪನದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ತಮ್ಮ ಹಾಗೂ ಕುಟುಂಬದ ಆಸ್ತಿ-ಪಾಸ್ತಿ ವಿವರಗಳನ್ನು ಭೌತಿಕವಾಗಿ (Physical Form) ಸಲ್ಲಿಸುತ್ತಿದ್ದರು. ಆದರೆ ಅಖಿಲ ಭಾರತ ಸೇವೆ (AIS) ಅಧಿಕಾರಿಗಳ ಮಾದರಿಯಲ್ಲೇ, ರಾಜ್ಯ ಸರ್ಕಾರದ ಸಚಿವಾಲಯ ಹಾಗೂ ಇತರ ಎಲ್ಲಾ ಇಲಾಖೆಗಳ ನೌಕರರಿಗೂ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನೆರವಿನೊಂದಿಗೆ ಈ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಂದಾಯ ಇಲಾಖೆಯ ತಹಶೀಲ್ದಾರ್‌ಗಳು ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಿಬ್ಬಂದಿಯನ್ನು ಈ ವ್ಯವಸ್ಥೆಯಲ್ಲಿ ಮ್ಯಾಪಿಂಗ್ ಮಾಡಲು ಕ್ರಮ ವಹಿಸಲಾಗಿದ್ದು, ಇದರಿಂದ ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ