image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಉದ್ಯೋಗ ನೀಡದ ಪಿಡಿಒಗಳ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಉದ್ಯೋಗ ನೀಡದ ಪಿಡಿಒಗಳ ಅಮಾನತಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು: ಜುಲೈ 1ರಿಂದ ಮನ್ರೇಗಾ ಬದಲಿಗೆ ಜಾರಿಗೆ ಬಂದಿರುವ 'ವಿಬಿಜಿ ರಾಮ್‌ ಜಿ' ಯೋಜನೆಯಡಿ ಉದ್ಯೋಗ ನೀಡದೆ ಹಾಗೂ ಮಾನವ ದಿನಗಳನ್ನು ಸೃಜಿಸದೆ ನಿರ್ಲಕ್ಷ್ಯ ತೋರಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, 2025ರ ಜುಲೈನಲ್ಲಿ ಮನ್ರೇಗಾ ಅಡಿ ಉದ್ಯೋಗ ನೀಡಿ, ಈ ವರ್ಷದ ಜುಲೈನಲ್ಲಿ ಒಬ್ಬರಿಗೂ ಕೆಲಸ ನೀಡದ ಪಂಚಾಯಿತಿಗಳ ಪಿಡಿಒಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದರು. ಉತ್ತರ ಪಡೆದ ನಂತರ ಕರ್ತವ್ಯಲೋಪ ಹಾಗೂ ಉದಾಸೀನತೆ ಸಾಬೀತಾದಲ್ಲಿ ಅಂತಹ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡುವಂತೆ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನಿರ್ದೇಶನ ನೀಡಿದರು.

ವಿಬಿಜಿ ರಾಮ್‌ ಜಿ ಯೋಜನೆಯಡಿ ಪ್ರತಿದಿನ ಕನಿಷ್ಠ 5 ಲಕ್ಷ ಮಾನವ ದಿನ ಸೃಜನೆಯಾಗುವವರೆಗೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಆಯುಕ್ತರು ಎಲ್ಲಾ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ನಿತ್ಯ ವರ್ಚುವಲ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು. ಅದೇ ರೀತಿ ಜಿ.ಪಂ. ಸಿಇಒಗಳು ತಾಲೂಕು ಇ.ಒ ಮತ್ತು ಪಿಡಿಒಗಳೊಂದಿಗೆ ನಿರಂತರ ಸಭೆ ನಡೆಸಿ ಉದ್ಯೋಗ ಸೃಷ್ಟಿಯ ಪ್ರಗತಿಯನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರು ಸುತ್ತಮುತ್ತ ₹382 ನಿಯಮಿತ ಕೂಲಿಗೆ ಜನರು ಬರುವುದಿಲ್ಲ ಎಂಬ ನೆಪ ಹೇಳದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಕೆಲಸ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ಡಿ. ರಂದೀಪ್, ಆಯುಕ್ತರಾದ ದಿವ್ಯಾ ಪ್ರಭು, ಫೌಜಿಯಾ ತರನ್ನುಂ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ