ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಡಲಾಗಿದ್ದ 8 ಕೆರೆಗಳನ್ನು ಮತ್ತೆ ಯೋಜನೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಜಲಸಂಪನ್ಮೂಲ ಇಲಾಖೆ ಚಾಲನೆ ನೀಡಿದೆ. ಈ ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ತೀರುವಳಿ (ಅನುಮೋದನೆ) ಪಡೆದು, ಸೂಕ್ತ ಶಿಫಾರಸ್ಸಿನೊಂದಿಗೆ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆಯು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ (VJNL) ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದೆ.
ಕ್ಷೇತ್ರದ ರೈತರ ಹಿತದೃಷ್ಟಿಯಿಂದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಯೋಜನೆಯ ಕಾರ್ಯಸಾಧ್ಯತೆ ಕುರಿತು 'ಆಲ್ಕಾನ್ ಕನ್ಸಲ್ಟೆನ್ಸಿ ಇಂಜಿನಿಯರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ವಿಸ್ತೃತ ಕ್ಷೇತ್ರ ಸಮೀಕ್ಷೆ ನಡೆಸಿ, 102.50 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಈ ಅಂದಾಜು ಪಟ್ಟಿಯನ್ನು 2025ರ ಸೆಪ್ಟೆಂಬರ್ 19ರಂದು ನಡೆದ ಅಂದಾಜು ಪರಿಶೀಲನಾ ಸಮಿತಿಯ ಸಭೆಯಲ್ಲೂ ಮಂಡಿಸಲಾಗಿತ್ತು.
ಈ ಕುರಿತು ನಿಯಮಾನುಸಾರ ಸೂಕ್ತ ಪರಿಶೀಲನೆ ನಡೆಸಿ, ಜಲನಿಗಮದ ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡ ನಂತರ ಅಂತಿಮ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-4) ಎಲ್. ಲಕ್ಷ್ಮೀ ಅವರು ನಿರ್ದೇಶಿಸಿದ್ದಾರೆ. ಇದರಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತರಾಗಿದ್ದ ಕ್ಷೇತ್ರದ ಕೆರೆಗಳಿಗೆ ನೀರು ಹರಿಯುವ ನಿರೀಕ್ಷೆ ಮೂಡಿದ್ದು, ಸ್ಥಳೀಯ ರೈತರಲ್ಲಿ ಸಂತಸ ತಂದಿದೆ.