image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೆ.ಆರ್. ಮಾರುಕಟ್ಟೆಯಲ್ಲಿ ಜಿಬಿಎ ಮೆಗಾ ಡ್ರೈವ್: 233 ಅಕ್ರಮ ಮಳಿಗೆಗಳು ನೆಲಸಮ

ಕೆ.ಆರ್. ಮಾರುಕಟ್ಟೆಯಲ್ಲಿ ಜಿಬಿಎ ಮೆಗಾ ಡ್ರೈವ್: 233 ಅಕ್ರಮ ಮಳಿಗೆಗಳು ನೆಲಸಮ

ಬೆಂಗಳೂರು : ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಆವರಣ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮಿ (ಮೈಸೂರು ರಸ್ತೆ) ಮೇಲ್ಸೇತುವೆ ಕೆಳಭಾಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿದ್ದ 233 ಅನಧಿಕೃತ ಮಳಿಗೆಗಳು ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಕೇಂದ್ರ ನಗರ ಪಾಲಿಕೆಯು ಯಶಸ್ವಿಯಾಗಿ ತೆರವುಗೊಳಿಸಿದೆ. ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರ ನೇರ ನೇತೃತ್ವದಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಯ ಮೂಲಕ, ನಗರದ ಅತ್ಯಂತ ದಟ್ಟಣೆಯ ಹಾಗೂ ಸವಾಲಿನ ಪ್ರದೇಶದಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಬಲಭಾಗದಲ್ಲಿದ್ದ ಮತ್ತು ಪಾದಚಾರಿ ಸುರಕ್ಷಾ ಗ್ರಿಲ್ ಒಳಭಾಗದಲ್ಲಿದ್ದ 200 ಅಂಗಡಿಗಳು ಹಾಗೂ ಫ್ಲೈಓವರ್ ಕೆಳಭಾಗದಲ್ಲಿದ್ದ 33 ಅಂಗಡಿಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗೆ 6 ಜೆಸಿಬಿ, 4 ಟಿಪ್ಪರ್ ಲಾರಿ ಹಾಗೂ 10 ಟ್ರ್ಯಾಕ್ಟರ್‌ಗಳನ್ನು ಬಳಸಲಾಗಿದೆ. ಕಾರ್ಯಾಚರಣೆಗೂ ಮುನ್ನ ಪಾಲಿಕೆಯ ಮಾರ್ಷಲ್‌ಗಳ ತಂಡವು ಸೋಮವಾರ ಮತ್ತು ಮಂಗಳವಾರ ಮೈಕ್ ಮೂಲಕ ಸ್ವಯಂಪ್ರೇರಿತ ತೆರವಾರಿಕೆಗೆ ಮನವಿ ಮಾಡಿತ್ತು ಹಾಗೂ ಮಳಿಗೆಗಳಿಗೆ ಅಧಿಕೃತ ಸೂಚನಾ ಸ್ಟಿಕ್ಕರ್‌ಗಳನ್ನು ಅಂಟಿಸಿ ಮುಂಗಡ ಮಾಹಿತಿ ನೀಡಿತ್ತು.

ಕಾನೂನುಬದ್ಧವಾಗಿ ಕೈಗೊಳ್ಳಲಾದ ಈ ಕಾರ್ಯಾಚರಣೆಯಲ್ಲಿ ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಎಂಜಿನಿಯರಿಂಗ್ ವಿಭಾಗದ 90 ಸಿಬ್ಬಂದಿ, ಘನತ್ಯಾಜ್ಯ ನಿರ್ವಹಣೆಯ 60, ಪೊಲೀಸ್ ಇಲಾಖೆಯ 60, ಬೆಸ್ಕಾಂ ಹಾಗೂ ಕಂದಾಯ, ಆರೋಗ್ಯ ಮತ್ತು ಅಗ್ನಿಶಾಮಕ ದಳದ ಒಟ್ಟು 270ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಾರ್ವಜನಿಕ ಸುರಕ್ಷತೆಗಾಗಿ ವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಸೇವೆಗಳನ್ನು ಸಮನ್ವಯಗೊಳಿಸಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಈ ಕಾರ್ಯಾಚರಣೆಯು ಕೆ.ಆರ್. ಮಾರುಕಟ್ಟೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯನ್ನು ನಿತ್ಯ ಬಳಸುವ ಲಕ್ಷಾಂತರ ಜನರಿಗೆ ಸಿಕ್ಕ ದೊಡ್ಡ ಗೆಲುವು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಹಳೆಯ ಬಿಬಿಎಂಪಿಯ ನಕಲಿ ದಾಖಲೆಗಳನ್ನು ಆಧರಿಸಿ ನಿರ್ಮಿಸಲಾಗಿದ್ದ ಈ ಮೆಟಲ್ ಅಂಗಡಿಗಳಿಂದ ಐತಿಹಾಸಿಕ ಬೆಂಗಳೂರು ಕೋಟೆಯ ನೋಟವೇ ಮರೆಯಾಗಿತ್ತು. ಅಂಗಡಿಯವರ ಬಳಿಯಿದ್ದ ನಕಲಿ ದಾಖಲೆಗಳನ್ನು ಗುರುತಿಸಿದ್ದ ಹೈಕೋರ್ಟ್, 15 ದಿನಗಳಲ್ಲಿ ಒತ್ತುವರಿ ತೆರವುಗೊಳಿಸುವಂತೆ ನೀಡಿದ್ದ ಆದೇಶದ ಗಡುವು ಮುಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 200 ಕಿ.ಮೀ. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಗಿದ್ದು, ಬಾಕಿ ಇರುವ 50 ಕಿ.ಮೀ. ಭಾಗದಲ್ಲೂ ಮುಂದಿನ ದಿನಗಳಲ್ಲಿ ಇಂತಹ ವಿಶೇಷ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ