ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ 'ಉದ್ಯೋಗಕ್ಕಾಗಿಯೇ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ'ವನ್ನು ಕಡ್ಡಾಯಗೊಳಿಸಿರುವುದು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಶೈಕ್ಷಣಿಕ ಅಥವಾ ಇತರೆ ಉದ್ದೇಶಕ್ಕೆ ಪಡೆದ ಪ್ರಮಾಣಪತ್ರಗಳನ್ನು ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿರುವುದೇ ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ.
ಗ್ರಾಮ ಆಡಳಿತ ಅಧಿಕಾರಿ (ವಿಎ), ಭೂಮಾಪಕರು (ಸರ್ವೇಯರ್), ವಸತಿ ಶಾಲೆಗಳ ಶಿಕ್ಷಕರು ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ವಿವಿಧ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಈ ಹೊಸ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರವು ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಿರುವುದರಿಂದ ಈ ಬಾರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಅರ್ಜಿ ಸಲ್ಲಿಕೆಗೆ ಕೊಟ್ಟಿರುವ ಅಂತಿಮ ದಿನಾಂಕ ಹತ್ತಿರ ಬರುತ್ತಿದ್ದು, ಹೊಸದಾಗಿ ಪ್ರಮಾಣಪತ್ರ ಪಡೆಯಲು ವಾರಗಳೇ ಬೇಕಾಗುವುದರಿಂದ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಭೀತಿ ಉದ್ಯೋಗಾಕಾಂಕ್ಷಿಗಳನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಹೆಚ್ಚಿನ ಅಭ್ಯರ್ಥಿಗಳು ತಮ್ಮ ಶಾಲಾ-ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದಿರುತ್ತಾರೆ. ಆದರೆ, ಈಗ ಉದ್ಯೋಗದ ಉದ್ದೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಹೋದರೆ, ತಂತ್ರಾಂಶದಲ್ಲಿ ಈಗಾಗಲೇ ಆರ್‌ಡಿ (RD) ಸಂಖ್ಯೆಯ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ತೋರಿಸುತ್ತಿದ್ದು, ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಈ ಸಮಸ್ಯೆಯಿಂದ ಪಾರಾಗಲು ಅಭ್ಯರ್ಥಿಗಳು ಮೊದಲು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ತಮ್ಮ ಹಳೆಯ ಪ್ರಮಾಣಪತ್ರವನ್ನು ರದ್ದು ಮಾಡಿಸಬೇಕಾಗಿದೆ. ಹಳೆಯ ಪ್ರಮಾಣಪತ್ರ ರದ್ದಾದ ಬಳಿಕವಷ್ಟೇ ಉದ್ಯೋಗಕ್ಕಾಗಿ ಹೊಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ತಿಳಿಸಿದ್ದು, ಈ ಸಂಕೀರ್ಣ ಪ್ರಕ್ರಿಯೆಯಿಂದ ಅಭ್ಯರ್ಥಿಗಳು ದಿಕ್ಕುತೋಚದಂತಾಗಿದ್ದಾರೆ.