ಬೆಂಗಳೂರು: ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಳಜಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 'ಋತುತಾರೆ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ದೇಶದಲ್ಲೇ ಪ್ರಥಮ ಬಾರಿಗೆ ಮೆನೋಪಾಸ್ (ಋತುಬಂಧ) ಹಾಗೂ ಮಹಿಳಾ ಆರೋಗ್ಯ ಸಮಸ್ಯೆಗಳ ಕುರಿತು ವಿಶೇಷ ಅರಿವು ಮೂಡಿಸಲು ರೂಪಿಸಲಾದ ಈ ಯೋಜನೆಗೆ ನಟಿ ರಮ್ಯಾ ಅವರನ್ನು ರಾಯಭಾರಿಯನ್ನಾಗಿ నేಮಿಸಲಾಗಿದೆ. ಸಾಮಾನ್ಯವಾಗಿ ಮಹಿಳೆಯರು 45 ರಿಂದ 55 ವರ್ಷದ ಆಸುಪಾಸಿನಲ್ಲಿ ಋತುಬಂಧದ ಹಂತ ತಲುಪುತ್ತಾರೆ. ಈ ಸಂದರ್ಭದಲ್ಲಿ ಶರೀರದಲ್ಲಿ ಉಂಟಾಗುವ ಹಾರ್ಮೋನ್‌ಗಳ ಏರುಪೇರು ಹಾಗೂ ಮಾನಸಿಕ-ದೈಹಿಕ ಯಾತನೆಗಳ ಬಗ್ಗೆ ಸಮಾಜದಲ್ಲಿ ಮತ್ತು ಸ್ವತಃ ಮಹಿಳೆಯರಲ್ಲೇ ಅರಿವಿನ ಅಭಾವವಿದೆ. ಈ ಮುಜುಗರ ಹಾಗೂ ಮಾಹಿತಿಯ ಕೊರತೆಯನ್ನು ನೀಗಿಸಿ, ಪ್ರತಿಯೊಬ್ಬ ಹೆಣ್ಣಿಗೂ ಅಗತ್ಯ ಆರೋಗ್ಯ ಬೆಂಬಲ ನೀಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.
ಈ ಯೋಜನೆಯ ಭಾಗವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಸಮಗ್ರ ಅಧ್ಯಯನ ಹಾಗೂ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಲು ತಜ್ಞ ವೈದ್ಯೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನು ನೇಮಿಸಲಾಗಿದೆ. ಮುಂಬರುವ ಆರು ತಿಂಗಳ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮೆನೋಪಾಸ್ ಸಮಯದ ಲಕ್ಷಣಗಳು, ಅಗತ್ಯ ಆರೈಕೆ ಹಾಗೂ ಜೀವನಶೈಲಿ ಬದಲಾವಣೆಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಮುಟ್ಟು ನಿಲ್ಲುವ ಅವಧಿಯಲ್ಲಿ ಮಹಿಳೆಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಸೂಕ್ತ ಆಹಾರ ಪದ್ಧತಿ ಹಾಗೂ ಮಾನಸಿಕ ಬೆಂಬಲದ ಕುರಿತು ಸಾರ್ವಜನಿಕವಾಗಿ ಅರಿವು ಉಂಟುಮಾಡಲು ಸರ್ಕಾರ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ರಮ್ಯಾ, ಭಾರತೀಯ ಮಹಿಳೆಯರಲ್ಲಿ ವಿದೇಶಗಳಿಗೆ ಹೋಲಿಸಿದರೆ ಬೇಗನೆ ಮೆನೋಪಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಮುಕ್ತವಾಗಿ ಮಾತನಾಡುವ ವಾತಾವರಣ ಸೃಷ್ಟಿಯಾಗಬೇಕಿದೆ ಎಂದರು. ರಾಜ್ಯ ಸರ್ಕಾರದ ಈ ಐತಿಹಾಸಿಕ ಹೆಜ್ಜೆಯು ಲಕ್ಷಾಂತರ ಮಹಿಳೆಯರ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.