ಬೆಂಗಳೂರು : ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ 1.11 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು 'ಎಎಸ್‌ಡಿಡಿಒ' (ಗೈರುಹಾಜರಿ, ಸ್ಥಳಾಂತರ, ನಕಲಿ, ಮೃತ ಮತ್ತು ಇತರೆ) ವರ್ಗದಡಿ ಗುರುತಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕವೇ ತಮ್ಮ ಹೆಸರು ಹಾಗೂ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳು (CEO) ಅವಕಾಶ ಕಲ್ಪಿಸಿದ್ದಾರೆ. ಮತದಾರರು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ (ceo.karnataka.gov.in/asddo.html) ಭೇಟಿ ನೀಡಿ, ಜಿಲ್ಲಾವಾರು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಒಂದೊಮ್ಮೆ ನೀವು ನಿಮ್ಮ ಹಳೆಯ ವಿಳಾಸದಲ್ಲೇ ನೆಲೆಸಿದ್ದರೂ, ಎಎಸ್‌ಡಿಡಿಒ ಪಟ್ಟಿಯಲ್ಲಿ ನಿಮ್ಮ ಹೆಸರು 'ಸ್ಥಳಾಂತರಗೊಂಡಿದ್ದಾರೆ' ಅಥವಾ 'ಗೈರುಹಾಜರಾಗಿದ್ದಾರೆ' ಎಂದು ತಪ್ಪಾಗಿ ನಮೂದಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ.
ತಕ್ಷಣವೇ ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯನ್ನು (BLO) ಸಂಪರ್ಕಿಸಿ, ಪ್ರಸ್ತುತ ಅದೇ ವಿಳಾಸದಲ್ಲಿ ವಾಸವಿರುವುದನ್ನು ದೃಢೀಕರಿಸಬಹುದು. ಬಿಎಲ್‌ಒ ನೀಡುವ ಸ್ವಯಂ ಘೋಷಣಾ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದರೆ ನಿಮ್ಮ ಹೆಸರನ್ನು ಎಎಸ್‌ಡಿಡಿಒ ಪಟ್ಟಿಯಿಂದ ತೆಗೆದುಹಾಕಿ ಸರಿಪಡಿಸಲಾಗುತ್ತದೆ. ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ ಎಎಸ್‌ಡಿಡಿಒ ಪಟ್ಟಿಯಲ್ಲಿಯೇ ಉಳಿಯುವ ಹೆಸರುಗಳನ್ನು ಕೈಬಿಡಲಾಗುತ್ತದೆ. ಹೀಗಾಗಿ ಮತದಾರರು ತಕ್ಷಣವೇ ಆನ್‌ಲೈನ್‌ನಲ್ಲಿ ಹೆಸರು ಪರಿಶೀಲಿಸಿಕೊಂಡು, ಅಗತ್ಯವಿದ್ದರೆ ತಮ್ಮ ಬಿಎಲ್‌ಒಗಳನ್ನು ಸಂಪರ್ಕಿಸಿ ಸ್ವಯಂ ಘೋಷಣಾ ನಮೂನೆ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.