image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜೀನಾಮೆ ಕೊಟ್ಟರೆ ಐದೇ ನಿಮಿಷದಲ್ಲಿ ಅಂಗೀಕಾರ: ಅಸಮಾಧಾನಿತ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ರಾಜೀನಾಮೆ ಕೊಟ್ಟರೆ ಐದೇ ನಿಮಿಷದಲ್ಲಿ ಅಂಗೀಕಾರ: ಅಸಮಾಧಾನಿತ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಬೆಂಗಳೂರು : ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರು ಹಾಗೂ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ರಾಜೀನಾಮೆ ತಂದುಕೊಟ್ಟರೆ ಕ್ಷಣಮಾತ್ರದಲ್ಲಿ, ಅಂದರೆ ಐದೇ ನಿಮಿಷದಲ್ಲಿ ಅದನ್ನು ಅಂಗೀಕರಿಸುವುದಾಗಿ ಹೇಳಿರುವ ಸಿಎಂ, ರಾಜಕೀಯದಲ್ಲಿ ಇಂತಹ ಬೆದರಿಕೆಗಳು ಸಹಜ ಹಾಗೂ ಯಾರನ್ನೂ ಬಲವಂತವಾಗಿ ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷ ಮತ್ತು ತಮ್ಮ ರಾಜಕೀಯ ಭವಿಷ್ಯ ಮುಖ್ಯ ಅನಿಸಿದರೆ ಮಾತ್ರ ಪಕ್ಷದಲ್ಲೇ ಇರಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆ ವೇಳೆ ತಮಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲವಾದರೂ ತಾಳ್ಮೆಯಿಂದಿದ್ದ ಉದಾಹರಣೆಯನ್ನು ನೀಡಿದರು. ಇತಿಹಾಸದಲ್ಲಿ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಬಂಗಾರಪ್ಪ ಅವರಿಗೆ ಹಾಗೂ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆರಂಭದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ತಾಳ್ಮೆಯಿಂದ ಕಾದಿದ್ದಕ್ಕೆ ಮುಂದೆ ಅವರು ದೊಡ್ಡ ಮಟ್ಟದ ಅಧಿಕಾರ ಪಡೆಯಲು ಸಾಧ್ಯವಾಯಿತು. ಹೀಗಾಗಿ ಪ್ರತಿಯೊಬ್ಬರಿಗೂ ವ್ಯಕ್ತಿಗಿಂತ ಪಕ್ಷವೇ ಪ್ರಮುಖ ಎಂದು ನೆನಪಿಸಿದರು.

ಇದರೊಂದಿಗೆ, ನಿಗಮ-ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ 2.5 ವರ್ಷಗಳಿಗೆ ಮಾತ್ರ ಸೀಮಿತ ಎಂಬ ನಿಯಮದಂತೆ ಹಾಲಿ ಅಧ್ಯಕ್ಷರು ತಕ್ಷಣವೇ ತಮ್ಮ ರಾಜೀನಾಮೆ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ. ಮೊದಲು ಪಕ್ಷದ ಕಾರ್ಯಕರ್ತರನ್ನು ಹಾಗೂ ಬಳಿಕ ಅಸಮಾಧಾನಗೊಂಡ ಶಾಸಕರನ್ನು ಕರೆದು ಅವರ ಕುಂದುಕೊರತೆಗಳನ್ನು ಆಲಿಸುವುದಾಗಿ ತಿಳಿಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಸಚಿವರು ಕೂಡಲೇ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗೆ ತೆರಳುವಂತೆ ನಿರ್ದೇಶನ ನೀಡಿದ್ದಾರೆ.

Category
ಕರಾವಳಿ ತರಂಗಿಣಿ