image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಲ್‌ನಿನೋ ಆತಂಕದ ನಡುವೆ ದೇಶಕ್ಕೆ 'ಐಒಡಿ' ಮೂಲಕ ಶುಭಸಂದೇಶ

ಎಲ್‌ನಿನೋ ಆತಂಕದ ನಡುವೆ ದೇಶಕ್ಕೆ 'ಐಒಡಿ' ಮೂಲಕ ಶುಭಸಂದೇಶ

ಬೆಂಗಳೂರು : ಎಲ್‌ನಿನೋ ಪರಿಣಾಮದಿಂದಾಗಿ ದೇಶಾದ್ಯಂತ ಮುಂಗಾರು ಮಳೆಯ ಕೊರತೆಯ ಅಪಾಯ ದಟ್ಟವಾಗಿರುವಂತೆಯೇ, ಜಾಗತಿಕ ಹವಾಮಾನ ಸಂಸ್ಥೆಯು (WMO) ಆಶಾದಾಯಕ ಸುದ್ದಿಯೊಂದನ್ನು ನೀಡಿದೆ. ಪ್ರಸ್ತುತ ದೇಶದಲ್ಲಿ ಶೇಕಡಾ 20 ಕ್ಕೂ ಹೆಚ್ಚು ಹಾಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚಿನ ಮಳೆ ಕೊರತೆ ದಾಖಲಾಗಿದೆ. ವಿಶ್ವ ಹವಾಮಾನ ಸಂಸ್ಥೆಯ ಮಾಸಿಕ ವರದಿಯ ಅನ್ವಯ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಎಲ್‌ನಿನೋ ಇನ್ನಷ್ಟು ತೀವ್ರಗೊಂಡು ಜಾಗತಿಕ ಉಷ್ಣಾಂಶ ಏರಿಕೆ ಹಾಗೂ ಬೆಳೆ ನಾಶದ ಆತಂಕ ಹೆಚ್ಚಾಗುವ ಸಾಧ್ಯತೆಯಿದೆ.

ಆದರೆ, ಈ ಭೀತಿಯ ನಡುವೆಯೂ 'ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್' (ಐಒಡಿ) ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದು ದೇಶದಲ್ಲಿ ಉತ್ತಮ ಮಳೆಗೆ ಕಾರಣವಾಗಬಹುದು ಎಂದು ಸಂಸ್ಥೆ ತಿಳಿಸಿದೆ. 'ನೆಗೆಟಿವ್ ಐಒಡಿ' ಮುಂಗಾರು ಮಳೆಯ ಸಾಧ್ಯತೆಯನ್ನು ಕ್ಷೀಣಿಸಿದರೆ, 'ಪಾಸಿಟಿವ್ ಐಒಡಿ' ಮುಂಗಾರನ್ನು ಚುರುಕುಗೊಳಿಸಿ ಹೆಚ್ಚಿನ ಮಳೆ ಸುರಿಸುವ ಶಕ್ತಿ ಹೊಂದಿದೆ. ಈ ಹಿಂದೆ 1997 ರಲ್ಲೂ ಎಲ್‌ನಿನೋ ಕಾರಣದಿಂದ ಭಾರಿ ಮಳೆ ಕೊರತೆ ಉಂಟಾಗಿದ್ದಾಗ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಐಒಡಿ ದೇಶದ ಹಲವು ಭಾಗಗಳಲ್ಲಿ ಉತ್ತಮ ಮಳೆ ತರಿಸಿತ್ತು. ಪರಿಣಾಮವಾಗಿ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಶೇಕಡಾ 2 ರಷ್ಟು ಹೆಚ್ಚು ಮಳೆ ದಾಖಲಾಗಿತ್ತು. ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗದ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್‌ನಿನೋದ ನಕಾರಾತ್ಮಕ ಪರಿಣಾಮವನ್ನು, ಹಿಂದೂ ಮಹಾಸಾಗರದ ಉಷ್ಣಾಂಶ ವ್ಯತ್ಯಾಸದಿಂದ ಸೃಷ್ಟಿಯಾಗುವ 'ಐಒಡಿ' ಈ ಬಾರಿಯೂ ಸರಿದೂಗಿಸಲಿದೆ ಎಂಬ ನಿರೀಕ್ಷೆಯಿದೆ.

Category
ಕರಾವಳಿ ತರಂಗಿಣಿ