image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪರೀಕ್ಷಾ ಅಕ್ರಮ ತಡೆಗೆ ಸುಧಾರಣೆಯೇ ಮೋದಿ ಸರ್ಕಾರದ ಉತ್ತರ: ಡಾ. ಸಿ.ಟಿ. ರವಿ

ಪರೀಕ್ಷಾ ಅಕ್ರಮ ತಡೆಗೆ ಸುಧಾರಣೆಯೇ ಮೋದಿ ಸರ್ಕಾರದ ಉತ್ತರ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಸಮಂಜಸವಾದರೂ, ಹೋರಾಟವು ವಿನಾಶದ ಹಾದಿ ಹಿಡಿಯದೆ ಪರಿಹಾರ ಹಾಗೂ ರಚನಾತ್ಮಕ ಸುಧಾರಣೆಯ ದಿಕ್ಕಿನಲ್ಲಿ ಸಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಪ್ರತಿಪಾದಿಸಿದ್ದಾರೆ. ಚಿಕ್ಕಮಗಳೂರಿನ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ 'ಯೂಥ್ ಫಾರ್ ನೇಷನ್' ಆಯೋಜಿಸಿದ್ದ "ಪರೀಕ್ಷೆಯಿಂದ ಪರಿವರ್ತನೆಗೆ" ಸಂವಾದ ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವವು ನಿರ್ಮಾಣದ ಮಾರ್ಗವಾಗಿದ್ದು, ಯಾವುದೇ ಹೋರಾಟದ ಅಂತಿಮ ಗುರಿ ಸಮಾಜಕ್ಕೆ ಸುಧಾರಣಾತ್ಮಕ ಪರಿಹಾರ ನೀಡುವುದಾಗಿರಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಿದ್ದು, 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ತಲುಪಿಸಿ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಕ್ರಮ ಎಸಗಿದವರ ವಿರುದ್ಧ ಕಠಿಣ ಜೈಲು ಶಿಕ್ಷೆ, ದಂಡ ಹಾಗೂ ಜಾಮೀನು ರಹಿತ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಡಿಜಿಟಲ್ ಟ್ರ್ಯಾಕಿಂಗ್, ಎನ್‌ಕ್ರಿಪ್ಷನ್ ಮತ್ತು ಬಯೋಮೆಟ್ರಿಕ್‌ನಂತಹ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ ಕೆಪಿಎಸ್ಸಿಯಲ್ಲಿ ವೆಟರ್ನರಿ ಇನ್ಸ್‌ಪೆಕ್ಟರ್ ಹುದ್ದೆಗಳು ಲಂಚಕ್ಕೆ ಮಾರಾಟವಾಗುತ್ತಿರುವ ಆರೋಪಗಳನ್ನು ಪ್ರಸ್ತಾಪಿಸಿದ ಅವರು, ನೀಟ್ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಕೋರುವವರು ಕೆಪಿಎಸ್ಸಿ ಹುದ್ದೆಗಳ ವ್ಯಾಪಾರಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಮೋದಿ ಸರ್ಕಾರದಲ್ಲಿ ಭ್ರಷ್ಟ ವ್ಯವಸ್ಥೆಗೆ ಶೂನ್ಯ ಸಹಿಷ್ಣುತೆ ಇದ್ದು, ರಾಜಕೀಯ ಮಾಡುವ ಬದಲು ವ್ಯವಸ್ಥಿತ ಸುಧಾರಣೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ತಮ್ಮ ಜೀವನದ ಉದಾಹರಣೆ ನೀಡಿದ ರವಿ, ಪಿಯುಸಿಯಲ್ಲಿ ಶೇ. 42 ಅಂಕ ಪಡೆದಿದ್ದರೂ ನಂತರ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪೂರ್ಣಗೊಳಿಸಿದ್ದಾಗಿ ತಿಳಿಸಿ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ನೆನಪಿಸಿದರು. ಚಿಕ್ಕಮಗಳೂರನ್ನು ಶಿಕ್ಷಣ ಕೇಂದ್ರವಾಗಿ ಅಭಿವೃದ್ಧಿಪಡಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದ ಅವರು, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ದೇಶದ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಯುವ ಮುಖಂಡರು ಹಾಗೂ ಎಬಿವಿಪಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ