ಬೆಂಗಳೂರು : ಆಗಸ್ಟ್ 2ರಂದು ರಾಜ್ಯಾದ್ಯಂತ ನಡೆಯಲಿರುವ ಪೊಲೀಸ್ ಪೇದೆ (ಕಾನ್ಸ್‌ಸ್ಟೇಬಲ್) ಲಿಖಿತ ಪರೀಕ್ಷೆಗೆ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆಯನ್ನು ಯಾವುದೇ ರೀತಿಯ ಅಕ್ರಮ ಅಥವಾ ಅಡಚಣೆಗಳಿಲ್ಲದೆ ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರೀಕ್ಷಾ ಕೊಠಡಿ ಬಳಿ ಯಾವುದೇ ಗೊಂದಲ ಉಂಟಾಗದಂತೆ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಶೂ, ಟೋಪಿ ಹಾಗೂ ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವ ಯಾವುದೇ ಬಟ್ಟೆಗಳನ್ನು ಧರಿಸಲು ಅವಕಾಶವಿರುವುದಿಲ್ಲ. ಈ ಕುರಿತು ಪ್ರವೇಶ ಪತ್ರದಲ್ಲೂ ಸ್ಪಷ್ಟ ಮಾಹಿತಿ ನೀಡಲಾಗಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಹೆಚ್ಚಿನ ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಆಹಾರ ಪದಾರ್ಥಗಳು, ನೀರಿನ ಬಾಟಲಿ, ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕ, ಪೆನ್ಸಿಲ್ ಬಾಕ್ಸ್ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳನ್ನು ತರುವಂತಿಲ್ಲ.
ಅದೇ ಸಮಯದಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತೆ ಕೆ.ಇ.ಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್ ವಿಶೇಷ ಸೂಚನೆ ಹೊರಡಿಸಿದ್ದಾರೆ. ಕಳೆದ ಬಾರಿಯ ಗೊಂದಲಗಳನ್ನು ತಪ್ಪಿಸಲು ಅಭ್ಯರ್ಥಿಗಳು ಧರಿಸಿದ ಜನಿವಾರ, ಶಿವದಾರ, ಉಡುದಾರ, ಮಂಗಳಸೂತ್ರ, ಬಳೆ, ಮೂಗುತಿ, ಕಾಲುಂಗುರ, ಸಿಂಧೂರ ಅಥವಾ ಕೈಗೆ ಕಟ್ಟಿರುವ ಧಾರ್ಮಿಕ ದಾರಗಳನ್ನು ಬಲವಂತವಾಗಿ ತೆಗೆಸಬಾರದು ಎಂದು ಪರೀಕ್ಷಾ ಸಿಬ್ಬಂದಿಗೆ ಕಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ತಪಾಸಣೆಗಳನ್ನು ಸುಲಭಗೊಳಿಸಲು ಅಭ್ಯರ್ಥಿಗಳು ಪರೀಕ್ಷೆಗೆ ಎರಡುವರೆ ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸುವಂತೆ ಕೋರಲಾಗಿದೆ. ಪರೀಕ್ಷಾ ಭದ್ರತೆಯನ್ನು ಹೆಚ್ಚಿಸುವ ಭಾಗವಾಗಿ ಪರೀಕ್ಷಾ ಕೊಠಡಿಗಳಲ್ಲಿ ನಿಯೋಜಿತ ಸಿಬ್ಬಂದಿಯೂ ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಖಾಸಗಿ ತರಬೇತಿ ಕೇಂದ್ರಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಿದರೆ ತಕ್ಷಣವೇ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ.