image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾವೇರಿ ಕಿಚ್ಚು : ತಮಿಳುನಾಡು ಸಿಎಂ ವಿಜಯ್‌ ಬೆಂಗಳೂರು ಭೇಟಿ ಮುಂದೂಡಿಕೆ

ಕಾವೇರಿ ಕಿಚ್ಚು : ತಮಿಳುನಾಡು ಸಿಎಂ ವಿಜಯ್‌ ಬೆಂಗಳೂರು ಭೇಟಿ ಮುಂದೂಡಿಕೆ

ಬೆಂಗಳೂರು : ಕಾವೇರಿ ಜಲ ವಿವಾದ ಹಾಗೂ ಮೇಕೆದಾಟು ಯೋಜನೆಯ ಸುತ್ತ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಆಗಸ್ಟ್‌ 3 ರಂದು ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಕನ್ನಡಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಈ ಪ್ರಮುಖ ನಿರ್ಧಾರ ಹೊರಬಿದ್ದಿದ್ದು, ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುವವರೆಗೆ ಸಭೆಯನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಕ್ಕೆ ಬರುವ ಅತಿಥಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದಿದ್ದಾರೆ. ಉದ್ವಿಗ್ನ ವಾತಾವರಣದಲ್ಲಿ ನೆರೆಯ ರಾಜ್ಯದ ಮುಖ್ಯಮಂತ್ರಿಯನ್ನು ಕರೆಸಿ, ಇಲ್ಲಿ ಪ್ರತಿಭಟನೆ ಅಥವಾ ಗಲಾಟೆಗಳು ನಡೆದರೆ ತಮ್ಮ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಹೀಗಾಗಿ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣ ರೂಪುಗೊಂಡ ನಂತರ ಸಭೆ ನಡೆಸುವುದು ಸೂಕ್ತ ಎಂದು ಸಿಎಂ ವಿಜಯ್ ಅವರಲ್ಲಿ ವಿನಂತಿಸಿರುವುದಾಗಿ ತಿಳಿಸಿದರು.

ರಾಜ್ಯದ ಜಲಾಶಯಗಳಲ್ಲಿ ನೀರಿನ ಅಭಾವವಿರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಕಳೆದ 100 ವರ್ಷಗಳ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ 0.6 ಟಿಎಂಸಿ ನೀರನ್ನು ಮಾತ್ರ ಹರಿಸಲಾಗಿದ್ದು, ಪ್ರಸ್ತುತ ರಾಜ್ಯದ ಯಾವುದೇ ಡ್ಯಾಂಗಳಿಂದಲೂ ನೀರು ಬಿಡುತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು. ಮೇಕೆದಾಟು ಯೋಜನೆಯು ಕರ್ನಾಟಕಕ್ಕಿಂತ ಹೆಚ್ಚಾಗಿ ತಮಿಳುನಾಡಿಗೇ ಹೆಚ್ಚು ಅನುಕೂಲಕರವಾಗಿದೆ ಎಂದು ಪುನರುಚ್ಚರಿಸಿದ ಅವರು, ತಮಿಳುನಾಡು ಕೇಳಿರುವ ಸ್ಪಷ್ಟೀಕರಣಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು. ಇದೇ ವೇಳೆ ಆಗಸ್ಟ್‌ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ನಿರ್ಧಾರವನ್ನು ಹಿಂಪಡೆಯುವಂತೆ ವಿನಂತಿಸಿದ ಅವರು, ಸರ್ಕಾರ ಸದಾ ರೈತರ ಹಿತ ಕಾಯಲು ಬದ್ಧವಾಗಿದೆ ಎಂದು ಭರವಸೆ ನೀಡಿದರು. ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ವಪಕ್ಷ ಸಭೆ ಕರೆದು ವಿರೋಧ ಪಕ್ಷಗಳ ಸಲಹೆ ಪಡೆದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ