image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯದ ಹಕ್ಕು ರಕ್ಷಿಸಲು ಡಾ. ಸಿ.ಟಿ. ರವಿ ಆಗ್ರಹ

ರಾಜ್ಯದ ಹಕ್ಕು ರಕ್ಷಿಸಲು ಡಾ. ಸಿ.ಟಿ. ರವಿ ಆಗ್ರಹ

ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ, ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಲಿ ಹಾಗೂ ದೇಶದ ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಗಳು ನಾಶವಾಗಲಿ ಎಂದು ಪ್ರಾರ್ಥಿಸಿದ್ದಾಗಿ ಹೇಳಿದರು.

ವಿರೋಧ ಪಕ್ಷದಲ್ಲಿದ್ದಾಗ "ನಮ್ಮ ನೀರು, ನಮ್ಮ ಹಕ್ಕು" ಎಂದು ಪಾದಯಾತ್ರೆ ನಡೆಸಿದ್ದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಈಗ ಜಲಾಶಯಗಳ ನೀರನ್ನು ಮೊದಲು ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕು. ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ನೀರು ಬಿಡಬಾರದು. ಈ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತಳೆದರೆ ಬಿಜೆಪಿ ಬೆಂಬಲ ನೀಡಲಿದ್ದು, ಅವರು ತಮಿಳುನಾಡಿನ "ವಾಟರ್ ಮ್ಯಾನ್" ಆಗದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ತಮಿಳುನಾಡು ಮುಖ್ಯಮಂತ್ರಿ ಮಾತುಕತೆಗೆ ಬರುತ್ತಿರುವುದು ಸ್ವಾಗತಾರ್ಹವಾಗಿದ್ದು, ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಕುಡಿಯುವ ನೀರಿನ ಅಗತ್ಯ ಹಾಗೂ ಮೆಟ್ಟೂರು ಜಲಾಶಯದ ಪರಿಸ್ಥಿತಿಯನ್ನು ವಿವರಿಸಿ ಮನವರಿಕೆ ಮಾಡಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಹೆಚ್ಚುವರಿ ನೀರಿದ್ದರೆ ಮಾತ್ರ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಆ ವಾಸ್ತವಾಂಶವನ್ನು ತಮಿಳುನಾಡಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಳಂಬದ ಕುರಿತು ಮಾತನಾಡಿದ ರವಿ, ತಿಂಗಳುಗಟ್ಟಲೆ ದೆಹಲಿಯಲ್ಲಿ ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುವುದು ಸ್ವಾಭಿಮಾನಿ ರಾಜಕಾರಣಕ್ಕೆ ತಕ್ಕುದಲ್ಲ. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ನಿರಂತರವಾಗಿ ಕಾಯುತ್ತಿರುವುದು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಟೀಕಿಸಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಂತೆ ರಾಜ್ಯದ ಹಿತಾಸಕ್ತಿಗಾಗಿ ದೃಢ ನಿಲುವು ತಾಳಬೇಕು ಎಂದು ಸಲಹೆ ನೀಡಿದರು.

ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಪಕ ಹೋರಾಟ ನಡೆಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂಬ ಆರೋಪವನ್ನು ತಳ್ಳಿಹಾಕಿದರು. ಜನರ ಅಭಿಪ್ರಾಯ ಹಾಗೂ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಜನರ ಹಿತಾಸಕ್ತಿಗಾಗಿ ಇನ್ನಷ್ಟು ತೀವ್ರವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ