image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾವೇರಿ ನೀರು ಉಳಿಸಿ, ಕರ್ನಾಟಕದ ಹಕ್ಕು ರಕ್ಷಿಸಿ : ಡಾ. ಸಿ.ಟಿ. ರವಿ ಆಗ್ರಹ

ಕಾವೇರಿ ನೀರು ಉಳಿಸಿ, ಕರ್ನಾಟಕದ ಹಕ್ಕು ರಕ್ಷಿಸಿ : ಡಾ. ಸಿ.ಟಿ. ರವಿ ಆಗ್ರಹ

ಹೊಳೆನರಸೀಪುರ : ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಹಕ್ಕನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಮತ್ತು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬದಲು ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತವನ್ನು ಕಾಪಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ. ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದಲ್ಲಿದ್ದಾಗ "ನಮ್ಮ ನೀರು, ನಮ್ಮ ಹಕ್ಕು" ಎಂದು ಪಾದಯಾತ್ರೆ ನಡೆಸಿದ್ದರು. ಈಗ ಮುಖ್ಯಮಂತ್ರಿಯಾಗಿ ಅದೇ ನಿಲುವನ್ನು ಮುಂದುವರಿಸಿ ಕರ್ನಾಟಕದ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಯಾವುದೇ ಜಲಾಶಯದಿಂದ ಕುಡಿಯುವ ನೀರನ್ನು ಹೊರತುಪಡಿಸಿ ಕೃಷಿಗೆ ನೀರು ಬಿಡಬಾರದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದು, ರೈತರಿಗೆ ಬಿತ್ತನೆ ಮಾಡದಂತೆ ಸಲಹೆಯನ್ನೂ ನೀಡಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಭವಿಷ್ಯ ಹಾಗೂ ರಾಜ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಮುಖ್ಯಮಂತ್ರಿಗಳು ತಮಿಳುನಾಡಿಗೆ "ವಾಟರ್ ಮ್ಯಾನ್" ಆಗದೆ, ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಹಕ್ಕನ್ನು ಕಾಪಾಡಬೇಕು. ಸರ್ಕಾರ ಅಂತಹ ಕಠಿಣ ನಿಲುವು ತಳೆದರೆ ಮುಖ್ಯಮಂತ್ರಿಯವರ ಜೊತೆಗೆ ಬಿಜೆಪಿ ನಿಲ್ಲುತ್ತದೆ ಎಂದು ಅವರು ತಿಳಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿದ್ದರೂ, ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರಿದೆ. ಪ್ರಸ್ತುತ ನೀರಿನ ಅಗತ್ಯ ಕರ್ನಾಟಕಕ್ಕಿದ್ದು, ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಉತ್ತರ ಪತ್ರಿಕೆ ಅಕ್ರಮ ಸೇರಿದಂತೆ ಹಲವು ಪ್ರಕರಣಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಅಕ್ರಮಗಳನ್ನು ಸಕ್ರಮಗೊಳಿಸುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು. ವೆಟರನರಿ ಇನ್‌ಸ್ಪೆಕ್ಟರ್ ಹುದ್ದೆ, ಪೊಲೀಸ್ ಇಲಾಖೆ ನೇಮಕಾತಿ, ಎಡಬ್ಲ್ಯೂಇ (AWE) ಹಾಗೂ ಪಿಡಿಒ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಣದ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಕಾಂಗ್ರೆಸ್ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲಾ ನೇಮಕಾತಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಲ್ಲದೆ, ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಕೃಷಿ ಸಚಿವರ ನೇಮಕವಾಗಿಲ್ಲ; ರೈತರ ಸಂಕಷ್ಟಕ್ಕಿಂತ ಕಾಂಗ್ರೆಸ್‌ಗೆ ರಾಜಕೀಯ ಅಧಿಕಾರವೇ ಮುಖ್ಯವಾಗಿದೆ ಎಂದು ದೂರಿದರು.

ಪ್ರಹ್ಲಾದ್ ಜೋಶಿ ಅವರು ಕೇಂದ್ರ ಶಿಕ್ಷಣ ಸಚಿವರಾಗಿರುವುದನ್ನು ಕಾಂಗ್ರೆಸ್ ಟೀಕಿಸುವ ಬದಲು, ಕರ್ನಾಟಕದ ಪ್ರತಿನಿಧಿಯಾಗಿ ಅವರಿಗೆ ದೊರೆತಿರುವ ಜವಾಬ್ದಾರಿಯನ್ನು ಹೆಮ್ಮೆಯಿಂದ ಕಾಣಬೇಕಿತ್ತು. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಅಥವಾ ಇತರ ಆರೋಪಗಳಿಲ್ಲದಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದರು. ಬಿಜೆಪಿ ನಾಯಕರ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ ಸಿ.ಟಿ. ರವಿ ಅವರು, ಪ್ರಧಾನಿ, ರಾಷ್ಟ್ರಪತಿ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಟೀಕೆ ಮಾಡಿದರೂ ಕ್ರಮವಾಗುವುದಿಲ್ಲ, ಆದರೆ ರಾಹುಲ್ ಗಾಂಧಿ ಅವರನ್ನು ಟೀಕಿಸಿದರೆ ತಕ್ಷಣ ನೋಟಿಸ್ ಹಾಗೂ ಪ್ರಕರಣಗಳು ದಾಖಲಾಗುತ್ತವೆ ಎಂದರು. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಮತ್ತು ಅವರ ಕುಟುಂಬವನ್ನು ಸಂವಿಧಾನಕ್ಕಿಂತ ಮೇಲಿರುವಂತೆ ಪರಿಗಣಿಸುತ್ತಿದೆ. ಆದರೆ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರಕಾರ ದೇಶದ 140 ಕೋಟಿ ಜನರೂ ಸಮಾನರು, ಯಾವುದೇ ಕುಟುಂಬ ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಪ್ರತಿಪಾದಿಸಿದರು.

ತುರ್ತು ಪರಿಸ್ಥಿತಿಯನ್ನು ಎದುರಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಿದ ಪರಂಪರೆಯಿಂದ ತಾವು ಬಂದಿರುವುದರಿಂದ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಅಂತಹ ಕ್ರಮಗಳನ್ನು ರಾಜಕೀಯವಾಗಿ ಎದುರಿಸುತ್ತೇವೆ. ಕರ್ನಾಟಕದ ಹಿತಾಸಕ್ತಿ, ರೈತರ ಹಕ್ಕು ಮತ್ತು ರಾಜ್ಯದ ಸ್ವಾಭಿಮಾನಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲೂ ಬಿಜೆಪಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ ಎಂದು ಡಾ. ಸಿ.ಟಿ. ರವಿ ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ