image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಅಂಬಾರಿ' ಡಬಲ್ ಡೆಕ್ಕರ್ ಬಸ್ ಈಗ ಖಾಸಗಿ ಸಂಭ್ರಮಕ್ಕೂ ಲಭ್ಯ!

'ಅಂಬಾರಿ' ಡಬಲ್ ಡೆಕ್ಕರ್ ಬಸ್ ಈಗ ಖಾಸಗಿ ಸಂಭ್ರಮಕ್ಕೂ ಲಭ್ಯ!

ಬೆಂಗಳೂರು : ಕಲ್ಯಾಣ ಮಂಟಪ ಅಥವಾ ರೆಸಾರ್ಟ್‌ಗಳ ಸಾಂಪ್ರದಾಯಿಕ ವಾತಾವರಣದಿಂದ ಹೊರಬಂದು ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಲು ಬಯಸುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಸಿಹಿ ಸುದ್ದಿ ನೀಡಿದೆ. ನಿಗಮದ 'ಅಂಬಾರಿ' ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್‌ಗಳನ್ನು ಈಗ ಖಾಸಗಿ ಪಾರ್ಟಿಗಳು, ಜನ್ಮದಿನಾಚರಣೆ, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಬಾಡಿಗೆಗೆ ಪಡೆಯಬಹುದಾಗಿದೆ.

2026ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಚಾಲನೆ ಪಡೆದ 'ಅಂಬಾರಿ' ಡಬಲ್ ಡೆಕ್ಕರ್ ಬಸ್‌ ಸೇವೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಸ್ತುತ ನಿಗಮ ನಿರ್ವಹಿಸುತ್ತಿರುವ ಮೂರು ಬಸ್‌ಗಳ ಮೂಲಕ ಈವರೆಗೆ ಸುಮಾರು 20,000ಕ್ಕೂ ಹೆಚ್ಚು ಪ್ರವಾಸಿಗರು ನಗರ ಪರ್ಯಟನೆಯ 'ಹಾಪ್-ಆನ್, ಹಾಪ್-ಆಫ್' ಸೇವೆ ಬಳಸಿಕೊಂಡಿದ್ದಾರೆ. ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ತಾಣಗಳನ್ನು ವೀಕ್ಷಿಸುತ್ತಲೇ ಶೂಟಿಂಗ್ ಅಥವಾ ಆಚರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಸಮಾರಂಭಗಳು ಮತ್ತು ಪಾರ್ಟಿಗಳ 5 ಗಂಟೆಗಳ ಬಾಡಿಗೆ ದರ ವಾರಾಂತ್ಯದಲ್ಲಿ (ಶನಿವಾರ-ಭಾನುವಾರ) ₹28,000 ಹಾಗೂ ವಾರದ ದಿನಗಳಲ್ಲಿ (ಸೋಮವಾರ-ಶುಕ್ರವಾರ) ₹26,000 ನಿಗದಿಯಾಗಿದೆ (ಶೇ. 5 ಜಿಎಸ್‌ಟಿ ಪ್ರತ್ಯೇಕ). ಸಮಯ ಮೀರಿದರೆ ಇಡೀ ದಿನದ ದರ ಅನ್ವಯಿಸಲಿದ್ದು, ವಾರಾಂತ್ಯಕ್ಕೆ ₹40,000 ಹಾಗೂ ವಾರದ ದಿನಗಳಿಗೆ ₹32,000 ಇರಲಿದೆ.

ಫೋಟೋಶೂಟ್‌ಗಳಿಗಾಗಿ 2 ಗಂಟೆಗಳ ಪ್ಯಾಕೇಜ್ ಲಭ್ಯವಿದ್ದು, ವಾರಾಂತ್ಯದಲ್ಲಿ ₹16,000 ಹಾಗೂ ವಾರದ ದಿನಗಳಲ್ಲಿ ₹12,000 (ಶೇ. 5 ಜಿಎಸ್‌ಟಿ ಪ್ರತ್ಯೇಕ) ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ ₹7,000 ಹಾಗೂ ವಾರದ ದಿನಗಳಲ್ಲಿ ₹6,000 ಶುಲ್ಕ ಅನ್ವಯಿಸುತ್ತದೆ. ಸಾಮಾನ್ಯ ಪ್ರಯಾಣಿಕರಿಗೆ ಹಾಪ್-ಆನ್, ಹಾಪ್-ಆಫ್ ಟಿಕೆಟ್ ದರ ₹180 ಆಗಿಯೇ ಮುಂದುವರಿಯಲಿದೆ.

ಇದು ನಿಗಮಕ್ಕೆ ಹೆಚ್ಚುವರಿ ಆದಾಯ ತರುವುದರ ಜೊತೆಗೆ ಬೆಂಗಳೂರಿನ ಜನರಿಗೆ ಹೊಸ ಮಾದರಿಯ ಅನುಭವ ನೀಡುವ ಪ್ರಯತ್ನವಾಗಿದೆ ಎಂದು KSTDC ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಗೆ ಸೂಕ್ತ ಪ್ರಚಾರ ಸಿಕ್ಕಿ, ಖಾಸಗಿ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಸಹಯೋಗ ದೊರೆತರೆ ಭಾರತದಲ್ಲೇ ಇದು ವಿಶಿಷ್ಟ ಶೂಟಿಂಗ್ ಹಾಗೂ ಪಾರ್ಟಿ ಟ್ರೆಂಡ್ ಸೃಷ್ಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ