ಬೆಂಗಳೂರು : ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಕರಡು ಪಟ್ಟಿಯಿಂದ ಬರೋಬ್ಬರಿ 84,31,612 ಮತದಾರರ ಹೆಸರುಗಳನ್ನು ಹೊರಗಿಡಲು ಗುರುತಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ಹಂಚಿಕೊಂಡ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಅಧಿಕಾರಿಗಳು ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮೃತರ ಡೆತ್ ಸರ್ಟಿಫಿಕೇಟ್ ಸಂಗ್ರಹಿಸುವುದರ ಜೊತೆಗೆ ಸಂಬಂಧಪಟ್ಟವರಿಂದ ಸಹಿ ಪಡೆದು, ಈ 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕರಡು ಪಟ್ಟಿಯಿಂದ ಹೊರಗಿಡಲಾಗುತ್ತಿರುವ ಒಟ್ಟು 84,31,612 ಮತದಾರರಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡವರ ಸಂಖ್ಯೆ ಅತ್ಯಂತ ಹೆಚ್ಚಿದ್ದು, ಬರೋಬ್ಬರಿ 51,74,968 ಜನರು ಈ ವ್ಯಾಪ್ತಿಗೆ ಬರುತ್ತಾರೆ. ಇವರೊಂದಿಗೆ 14,99,799 ಮೃತಪಟ್ಟ ಮತದಾರರು, ಸುಳಿವು ಸಿಗದೆ ನಾಪತ್ತೆಯಾಗಿರುವ 11,61,231 ಜನರು, 5,62,572 ನಕಲಿ ಅಥವಾ ಎರಡೆರಡು ಕಡೆ ಮತ ಹಕ್ಕು ಹೊಂದಿರುವವರು ಮತ್ತು ಸಹಿ ಮಾಡಲು ನಿರಾಕರಿಸಿದ 33,042 ಇತರ ಜನರನ್ನು ಗುರುತಿಸಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ.
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದು, ಈ ಪೈಕಿ ಇದುವರೆಗೆ ಕೇವಲ 47.97 ಲಕ್ಷ ಜನರು ಮಾತ್ರ ಅರ್ಜಿಗಳನ್ನು ವಾಪಸ್ ನೀಡಿದ್ದಾರೆ. ಬರೋಬ್ಬರಿ 39.38 ಲಕ್ಷ (ಸುಮಾರು ಶೇಕಡಾ 40 ರಷ್ಟು) ಮತದಾರರ ಯಾವುದೇ ಸುಳಿವು ಸಿಕ್ಕಿಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ. ಉಳಿದ 16.57 ಲಕ್ಷ ಮತದಾರರು ತಮ್ಮ ಅರ್ಜಿಗಳನ್ನು ಶೀಘ್ರವೇ ಹಿಂತಿರುಗಿಸಬೇಕಿದೆ ಎಂದು ಆಯೋಗ ತಿಳಿಸಿದೆ. ರಾಜ್ಯಾದ್ಯಂತ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,26,75,861 ಅರ್ಜಿಗಳನ್ನು ಸ್ವೀಕರಿಸಿ ಡಿಜಿಟೈಸೇಷನ್ ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಎಸ್‌ಐಆರ್ ಕಾರ್ಯವು ಶೇಕಡಾ 76.99 ರಷ್ಟು ಪ್ರಗತಿ ಕಂಡಿದೆ. ಇನ್ನು 43,24,841 ಮತದಾರರ ಮಾಹಿತಿ ಸಿಗಬೇಕಿದ್ದು, ಆಗಸ್ಟ್ 8ರ ನಂತರ ಇವರ ಕುರಿತು ಸಂಪೂರ್ಣ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಪ್ರಕ್ರಿಯೆಯ ಭಾಗವಾಗಿ 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್ 6A ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್ 7 ಅರ್ಜಿಗಳು ಸ್ವೀಕೃತಗೊಂಡಿವೆ.
ಇದುವರೆಗೆ ಅರ್ಜಿ ವಾಪಸ್ ಕೊಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒ (BLO) ಸಹಾಯ ಪಡೆದು ಅರ್ಜಿ ಸಲ್ಲಿಸಬೇಕಾಗಿದೆ. ಸುಮಾರು 29 ಲಕ್ಷ ಮತದಾರರು '2002ರ ಮಾಹಿತಿ ಇಲ್ಲ' ಎಂಬ ಕಾರಣ ನೀಡಿ ಅರ್ಜಿ ವಾಪಸ್ ಕೊಟ್ಟಿದ್ದರೂ, ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಿದ್ದು, ದೇಶದ ಬೇರೆಲ್ಲೂ ಮತ ಹೊಂದಿಲ್ಲದಿದ್ದರೆ ಫಾರ್ಮ್-6 ಮೂಲಕ ಸೂಕ್ತ ವಿಳಾಸದ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಅವರು ರಾಜ್ಯದಲ್ಲಿ ವಾಸಿಸುತ್ತಿರುವ ಬಗ್ಗೆ ಸರಿಯಾದ ದಾಖಲೆ ಸಲ್ಲಿಸಿದರೆ ಹೆಸರನ್ನು ಪರಿಗಣಿಸಲಾಗುತ್ತದೆ, ಇಲ್ಲವಾದಲ್ಲಿ ಅಂತಿಮ ಪಟ್ಟಿಯಿಂದಲೂ ಹೊರಗಿಡಲಾಗುತ್ತದೆ.