ದಾವಣಗೆರೆ : ಕಾರ್ಗಿಲ್ ವಿಜಯವು ಕೇವಲ ಒಂದು ಯುದ್ಧದಲ್ಲಿ ಗಳಿಸಿದ ಗೆಲುವಲ್ಲ; ಅದು ಧೈರ್ಯ, ದೇಶಭಕ್ತಿ, ಕರ್ತವ್ಯನಿಷ್ಠೆ, ತ್ಯಾಗ ಹಾಗೂ ಅಸೀಮ ಪರಾಕ್ರಮದ ಸಂಕೇತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ. ದಾವಣಗೆರೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಷ.ಬ್ರ. ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರೇರಣಾ ಯುವ ಸಂಸ್ಥೆ ಆಯೋಜಿಸಿದ್ದ 27ನೇ ವರ್ಷದ 'ಕಾರ್ಗಿಲ್ ವಿಜಯ ದಿವಸ್-2026' ಹಾಗೂ ಹುತಾತ್ಮ ವೀರ ಯೋಧರಿಗೆ 'ವೀರ ನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1999ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್ ಬಸ್ ಯಾತ್ರೆಯ ಮೂಲಕ ಶಾಂತಿ ಸಂದೇಶ ನೀಡಿದ್ದರೂ, ಪಾಕಿಸ್ತಾನದ ಒಳನುಸುಳುವಿಕೆಯಿಂದಾಗಿ ಭಾರತ ಯುದ್ಧ ಎದುರಿಸಬೇಕಾಯಿತು. ಶಾಂತಿಗೆ ಬದ್ಧರಾಗಿದ್ದರೂ ರಾಷ್ಟ್ರದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಭಾರತ ಯುದ್ಧದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದೆ. ಸುಮಾರು 18 ಸಾವಿರ ಅಡಿ ಎತ್ತರದಲ್ಲಿ, ಮೈನಸ್ 30ರಿಂದ ಮೈನಸ್ 56 ಡಿಗ್ರಿಯಷ್ಟು ತೀವ್ರ ಚಳಿಯಲ್ಲಿ 74 ದಿನಗಳ ಕಾಲ ನಡೆದ ಯುದ್ಧದಲ್ಲಿ 526 ಯೋಧರು ಹುತಾತ್ಮರಾಗಿ, 1,300ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡರೂ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲಾಯಿತು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ "ದಿಲ್ ಮಾಂಗೇ ಮೋರ್" ಘೋಷಣೆ ಹಾಗೂ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಾಯರ್, ರೈಫಲ್‌ಮ್ಯಾನ್ ಸಂಜಯ್ ಕುಮಾರ್, ಗ್ರೇನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ಕ್ಯಾಪ್ಟನ್ ವಿಜಯಂತ್ ಥಾಪರ್ ಅವರಂತಹ ವೀರರ ತ್ಯಾಗವನ್ನು ಸಿ.ಟಿ. ರವಿ ಅವರು ಈ ವೇಳೆ ಸ್ಮರಿಸಿದರು.
ಕಾರ್ಗಿಲ್ ಯುದ್ಧದ ನಂತರ ದೇಶದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಕಾರ್ಗಿಲ್ ಪರಿಶೀಲನಾ ಸಮಿತಿಯ ಶಿಫಾರಸಿನಂತೆ ಮೂರು ಸೇನೆಗಳ ಸಮನ್ವಯ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆ ಸೃಷ್ಟಿ, ರಕ್ಷಣಾ ಗೂಢಚರ್ಯೆ ಸಂಸ್ಥೆ (ಡಿಐಎ) ಸ್ಥಾಪನೆ ಹಾಗೂ ಚಳಿಗಾಲದಲ್ಲೂ ಮುಂಚೂಣಿ ಸೇನಾ ನೆಲೆಗಳನ್ನು ಖಾಲಿ ಮಾಡದ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಭಾರತವು ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿ ಹಾಗೂ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಿಸುವ ಸಾಮರ್ಥ್ಯದೊಂದಿಗೆ ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯತ್ತ ಸಾಗಿದೆ. ಜೊತೆಗೆ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ, ಅಗ್ನಿಪಥ್ ಯೋಜನೆ ಹಾಗೂ 'ಒನ್ ರ್ಯಾಂಕ್ ಒನ್ ಪೆನ್ಷನ್' ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ದೇಶದ ಭದ್ರತೆ ಕಾಯುವ ಸೈನಿಕರನ್ನು ಜಾತಿಯ ದೃಷ್ಟಿಯಿಂದ ನೋಡುವುದು ರಾಷ್ಟ್ರಹಿತಕ್ಕೆ ವಿರುದ್ಧವಾಗಿದ್ದು, ಸೈನಿಕನಿಗೆ ದೇಶಭಕ್ತಿಯೇ ಮುಖ್ಯ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷ ಎಸ್.ಟಿ. ವೀರೇಶ್, ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್, ಮಾಜಿ ಸೈನಿಕ ಡಾ. ಹೆಚ್. ಹಾಲೇಶ್, ನಿವೃತ್ತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ, ಮುಖಂಡ ಅನಿತ ಹಾಗೂ ಹಲವು ಮಾಜಿ ಸೈನಿಕರು, ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.