image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಭಸ್ಮ!

ಬೆಂಗಳೂರಿನ ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಭಸ್ಮ!

ಬೆಂಗಳೂರು : ಬೆಂಗಳೂರಿನ ಥಣಿಸಂದ್ರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾರು ಗ್ಯಾರೇಜ್‌ವೊಂದರಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಜಾಗ್ವಾರ್, ಆಡಿ, ರೇಂಜ್ ರೋವರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಟಿಂಕರಿಂಗ್ ಮತ್ತು ಪೇಂಟಿಂಗ್ ನಂತಹ ಸಣ್ಣಪುಟ್ಟ ರಿಪೇರಿ ಕೆಲಸಗಳಿಗಾಗಿ ಗ್ರಾಹಕರು ತಂದು ನಿಲ್ಲಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳು ಬೆಂಕಿಯ ಜ್ವಾಲೆಗೆ ಬಲಿಯಾಗಿವೆ. ಗ್ಯಾರೇಜ್‌ನಾದ್ಯಂತ ತೈಲ ಹಾಗೂ ಇತರೆ ದಹನಕಾರಿ ವಸ್ತುಗಳಿದ್ದ ಕಾರಣ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲೇ ವ್ಯಾಪಿಸಿತು. ಗ್ಯಾರೇಜ್ ಪಕ್ಕದಲ್ಲೇ ಇದ್ದ ಶೆಡ್‌ಗೂ ಬೆಂಕಿ ಆವರಿಸಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ 8 ಆಟೋರಿಕ್ಷಾಗಳು ಹಾಗೂ ಸಮೀಪದ ಫ್ಯಾಕ್ಟರಿಗೂ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಐದು ಅಗ್ನಿಶಾಮಕ ವಾಹನಗಳ ನೆರವಿನಿಂದ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಕಿ ಪಕ್ಕದ ಕಟ್ಟಡಗಳಿಗೆ ಹರಡುವುದು ತಪ್ಪಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ನಿಖರವಾದ ಕಾರಣವನ್ನು ಕಂಡುಕೊಳ್ಳಲು ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ