image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಕಲಿ ಆದಾಯ ಪ್ರಮಾಣಪತ್ರ ಪ್ರಕರಣ : ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿಗೆ ಹೈಕೋರ್ಟ್ ತರಾಟೆ

ನಕಲಿ ಆದಾಯ ಪ್ರಮಾಣಪತ್ರ ಪ್ರಕರಣ : ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಸಾಹುಕಾರ್‌ಗೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸುಮಾ ಸಾಹುಕಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು. ವಿಚಾರಣೆ ವೇಳೆ ಪೀಠವು, "ವರ್ಷಕ್ಕೆ 30 ಲಕ್ಷ ರೂಪಾಯಿ ಆದಾಯವಿದ್ದರೂ ಕೇವಲ 40 ಸಾವಿರ ರೂಪಾಯಿ ಆದಾಯವಿದೆ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವುದು ಮೇಲ್ನೋಟಕ್ಕೇ ವಂಚನೆ ಎಂಬುದು ತಿಳಿಯುತ್ತಿದೆ. ಕೆಪಿಎಸ್‌ಸಿಯ ಪ್ರತಿಯೊಂದು ನೇಮಕಾತಿಯೂ ವಿವಾದಗಳಿಂದಲೇ ಕೂಡಿದ್ದು, ಬಡ ಅರ್ಹ ಅಭ್ಯರ್ಥಿಗೆ ಸಿಗಬೇಕಾದ ಆಯ್ಕೆಯ ಅವಕಾಶವನ್ನು ನೀವು ಕಿತ್ತುಕೊಂಡಿದ್ದೀರಿ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬಳಿಕ, ತನಿಖಾ ಸಂಸ್ಥೆಯು ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ ಮಾಡಿದ ನಂತರವೇ ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿತು. ನ್ಯಾಯಪೀಠದ ಕಠಿಣ ನಿಲುವನ್ನು ಗಮನಿಸಿದ ಅರ್ಜಿದಾರರ ವಕೀಲರು ಮಾಡಿದ ಮನವಿಯ ಮೇರೆಗೆ, ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲಾಯಿತು.

Category
ಕರಾವಳಿ ತರಂಗಿಣಿ