ಚಿಕ್ಕಮಗಳೂರು : ಚಿಕ್ಕಮಗಳೂರಿನಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಪತ್ರಿಕಾ ದಿನಾಚರಣೆ, 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಹಿರಿಯ ಪತ್ರಕರ್ತರಿಗೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 2025ನೇ ಸಾಲಿನ ಎಂ. ನಾಗೇಂದ್ರರಾವ್ ದತ್ತಿ ಪ್ರಶಸ್ತಿಗೆ ಭದ್ರಾವತಿಯ ಹಿರಿಯ ಪತ್ರಕರ್ತ ಕಣ್ಣಪ್ಪ, ಎಸ್. ಎಚ್. ರಂಗಸ್ವಾಮಿ ದತ್ತಿ ಪ್ರಶಸ್ತಿಗೆ ‘ಹೊಸದಿಗಂತ’ ಶಿವಮೊಗ್ಗ ಆವೃತ್ತಿಯ ಸ್ಥಳೀಯ ಸಂಪಾದಕ ಜಿ. ವಾದಿರಾಜ್ ಕಮರೂರು ಹಾಗೂ ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿಗೆ ‘ವಿಜಯವಾಣಿ’ ಪತ್ರಿಕೆಯ ಬೆಂಗಳೂರು ಮುಖ್ಯ ವರದಿಗಾರ ಶ್ರೀಕಾಂತ್ ಭಟ್ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದರು. ದಿವಂಗತ ಎಂ. ನಾಗೇಂದ್ರ ರಾವ್, ಎಸ್. ಎಚ್. ರಂಗಸ್ವಾಮಿ ಮತ್ತು ಮಿಂಚು ಶ್ರೀನಿವಾಸ್ ಅವರ ಸ್ಮರಣಾರ್ಥ ಕೆಯುಡಬ್ಲ್ಯೂಜೆ ಪ್ರತಿವರ್ಷ ಈ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರು ಶಾಸಕ ಹೆಚ್. ಡಿ. ತಮ್ಮಯ್ಯ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಸಮಾಜದ ಪ್ರಭಾವಶಾಲಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ ಎಂದರು. ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಮಾಧ್ಯಮಗಳು ಉದ್ಯಮದ ರೂಪ ಪಡೆದುಕೊಂಡು ಸವಾಲುಗಳನ್ನು ಎದುರಿಸುತ್ತಿದ್ದು, ಸಮಾಜವನ್ನು ಸುಶಿಕ್ಷಿತಗೊಳಿಸುವ ದೊಡ್ಡ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ, ತರೀಕೆರೆ ಶಾಸಕ ಜಿ. ಹೆಚ್. ಶ್ರೀನಿವಾಸ್, ಕೆಯುಡಬ್ಲ್ಯೂಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಹಿರಿಯ ಪತ್ರಕರ್ತ ರವಿ ಹೆಗ್ಡೆ ಅವರು ಮಾಧ್ಯಮ ಕ್ಷೇತ್ರದ ಸವಾಲುಗಳು ಮತ್ತು ಪತ್ರಿಕೋದ್ಯಮದ ವಿಶ್ವಸನೀಯತೆ ಕುರಿತು ಅನಿಸಿಕೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಹಿರಿಯ ಪತ್ರಕರ್ತರಾದ ಸ. ಗಿರಿಜಾ ಶಂಕರ್, ಬಿ. ಟಿ. ತಿಪ್ಪೇರುದ್ರಪ್ಪ, ಅಜ್ಜಂಪುರ ಅಪ್ಪಾಜಿ ಸೇರಿದಂತೆ ಹಲವು ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಅಲ್ಲದೆ ಕೆ. ಹೆಚ್. ರುದ್ರಯ್ಯ, ಬಿ. ಉಮೇಶ್ ನಾಯಕ್, ಅಕ್ರಮ್ ಅಬ್ದುಲ್ ಹಕ್, ಇಬ್ರಾಹಿಂ ಅಡ್ಡಸ್ಥಳ, ಶಿವಕುಮಾರ್ ಪತ್ತಾರ ಹಾಗೂ ಹೆಚ್. ಪಿ. ರವಿಕುಮಾರ್ ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯತ್ ಸಿಇಒ ಹೆಚ್. ಎಸ್. ಕೀರ್ತನಾ, ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಹೆಚ್. ಯು. ವೈದ್ಯನಾಥ್ ಸೇರಿದಂತೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನೂರಾರು ಪತ್ರಕರ್ತರು ಉಪಸ್ಥಿತರಿದ್ದರು.