image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಪರಿವರ್ತನೆ: ಡಾ. ಸಿ.ಟಿ. ರವಿ

ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಪರಿವರ್ತನೆ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ ಹಾಗೂ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಗಳ ಮೂಲಕ ದೇಶದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಪರಿವರ್ತನೆ ತಂದಿದ್ದು, ಬಡವರು ಮತ್ತು ಜನಸಾಮಾನ್ಯರಿಗೆ ನೇರ ನೆರವು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ನಗರದ ಎರಡನೇ ಜನೌಷಧಿ ಕೇಂದ್ರದ ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಅದರ ವೆಚ್ಚವನ್ನು ಭಾರತ ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಇದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಆಸರೆಯಾಗಿದೆ ಎಂದು ತಿಳಿಸಿದರು.

ಜನೌಷಧಿ ಕೇಂದ್ರಗಳ ಮೂಲಕ ಗುಣಮಟ್ಟದಲ್ಲಿ ಸಮಾನ ಪರಿಣಾಮಕಾರಿತ್ವ ಹೊಂದಿರುವ ಔಷಧಿಗಳನ್ನು ಶೇಕಡಾ 30ರಿಂದ ಶೇಕಡಾ 90ರವರೆಗೆ ಕಡಿಮೆ ದರದಲ್ಲಿ ಜನರಿಗೆ ಒದಗಿಸಲಾಗುತ್ತಿದೆ. ಬ್ರಾಂಡೆಡ್ ಹಾಗೂ ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳಲ್ಲಿರುವ ಅಂಶಗಳು ಒಂದೇ ಆಗಿದ್ದರೂ ಬೆಲೆಯಲ್ಲಿ ಗಣನೀಯ ವ್ಯತ್ಯಾಸವಿದೆ. ಬ್ರಾಂಡೆಡ್ ಔಷಧಿಗೆ 100 ರೂಪಾಯಿ ವೆಚ್ಚವಾಗುವ ಸಂದರ್ಭದಲ್ಲಿ, ಅದೇ ಗುಣಮಟ್ಟದ ಔಷಧಿ ಜನೌಷಧಿ ಕೇಂದ್ರಗಳಲ್ಲಿ ಸುಮಾರು 10 ರೂಪಾಯಿಗೆ ದೊರೆಯುತ್ತಿದೆ. ಇದು ರಕ್ತದೊತ್ತಡ, ಮಧುಮೇಹ ಸೇರಿದಂತೆ ದೀರ್ಘಕಾಲಿಕ ಕಾಯಿಲೆಗಳಿಗೆ ಪ್ರತಿನಿತ್ಯ ಔಷಧಿ ಸೇವಿಸಬೇಕಾದ ರೋಗಿಗಳಿಗೆ ಆರ್ಥಿಕವಾಗಿ ಬಹಳ ನೆರವಾಗುತ್ತಿದೆ ಎಂದು ವಿವರಿಸಿದರು.

ಹೃದಯ ಚಿಕಿತ್ಸೆಗೆ ಬಳಸುವ ಸ್ಟೆಂಟ್‌ಗಳಿಗೂ ಕೇಂದ್ರ ಸರ್ಕಾರ ದರ ನಿಗದಿಪಡಿಸಿ, ರೋಗಿಗಳಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುವ ಕ್ರಮ ಕೈಗೊಂಡಿದ್ದು, ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು. ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಸುಧಾರಣೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವಾಗುತ್ತಿದ್ದು, ದೇಶದ ಜನರು ಅವರನ್ನು "ಆಪತ್‌ಬಾಂಧವ" ಎಂದು ಕರೆಯುತ್ತಿದ್ದಾರೆ ಎಂದರು. ಚಿಕ್ಕಮಗಳೂರು ನಗರದ ತೊಗರಿಹಂಕಲ್ ಸರ್ಕಲ್‌ನಲ್ಲಿ ರಜನೀಶ್ ಅವರ ವತಿಯಿಂದ ಆರಂಭವಾಗಿರುವ ನಗರದ ಎರಡನೇ ಜನೌಷಧಿ ಕೇಂದ್ರದ ಮೂಲಕ ಸಾಮಾನ್ಯರು ಹಾಗೂ ಬಡ ರೋಗಿಗಳಿಗೆ ಉತ್ತಮ ಸೇವೆ ದೊರೆಯಲಿ ಎಂದು ಅವರು ಶುಭ ಹಾರೈಸಿದರು.

Category
ಕರಾವಳಿ ತರಂಗಿಣಿ