image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ 18 ಮಹಡಿಯ ಅಪಾರ್ಟ್‌ಮೆಂಟ್ ವಾಲಿದ್ದರಿಂದ ನೆಲಸಮಕ್ಕೆ ನಿರ್ಧಾರ

ಬೆಂಗಳೂರಿನ 18 ಮಹಡಿಯ ಅಪಾರ್ಟ್‌ಮೆಂಟ್ ವಾಲಿದ್ದರಿಂದ ನೆಲಸಮಕ್ಕೆ ನಿರ್ಧಾರ

ಬೆಂಗಳೂರು : ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ಗೇಟ್‌ ಬಳಿ ಇರುವ ಎಸ್‌ಎನ್‌ಎನ್‌ ರಾಜ್ ಎಟರ್ನಿಯಾ' ಅಪಾರ್ಟ್‌ಮೆಂಟ್ ಸಮುಚ್ಚಯದ 18 ಮಹಡಿಗಳ ಬೃಹತ್ ಟವರ್‌ ಒಂದು ಪಕ್ಕಕ್ಕೆ ವಾಲಿದ್ದು, ಮುಂಜಾಗ್ರತಾ ಕ್ರಮವಾಗಿ ಅದನ್ನು ಸಂಪೂರ್ಣವಾಗಿ ನೆಲಸಮ ಮಾಡಲು ಬಿಲ್ಡರ್‌ಗಳು ನಿರ್ಧರಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ವಾಸಯೋಗ್ಯ ಪ್ರಮಾಣಪತ್ರ (OC) ಪಡೆದುಕೊಂಡ ಕೇವಲ ಮೂರು ತಿಂಗಳಲ್ಲೇ ಈ ದೋಷ ಬೆಳಕಿಗೆ ಬಂದಿದ್ದು, ಸ್ಥಳೀಯರು ಹಾಗೂ ಮನೆ ಖರೀದಿದಾರರಲ್ಲಿ ಆತಂಕ ಮೂಡಿಸಿದೆ.

ನಾಲ್ಕು ವರ್ಷಗಳ ಸುದೀರ್ಘ ನಿರ್ಮಾಣದ ನಂತರ, ಗ್ರಾಹಕರು ಗೃಹಪ್ರವೇಶ ಮಾಡುವ ಮುನ್ನ ಬಿಲ್ಡರ್‌ಗಳು ನಡೆಸಿದ 'ವಾಟರ್ ಲೋಡ್ ಟೆಸ್ಟ್' ವೇಳೆಯಲ್ಲಿ ಕಟ್ಟಡವು ಒಂದು ಬದಿಗೆ ವಾಲುತ್ತಿರುವುದು ಮತ್ತು ತಳಭಾಗ ಕುಸಿಯುತ್ತಿರುವುದು ಪತ್ತೆಯಾಗಿದೆ. ಆರಂಭದಲ್ಲಿ ಮಣ್ಣಿನ ಪರೀಕ್ಷೆ ನಡೆಸಿದ್ದ ಸಂಸ್ಥೆಯು ಪ್ರಮುಖ ವರದಿಗಳನ್ನು ಅದಲು-ಬದಲು ಮಾಡಿದ್ದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ತಿಳಿದುಬಂದಿದೆ. ಪ್ರಸ್ತುತ ಕಟ್ಟಡವು ಹೊರನೋಟಕ್ಕೆ ಸುರಕ್ಷಿತವಾಗಿ ಕಂಡರೂ, ಮುಂದಿನ 10-15 ವರ್ಷಗಳಲ್ಲಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಒಟ್ಟು 15 ಟವರ್‌ಗಳು ಹಾಗೂ 972 ಫ್ಲ್ಯಾಟ್‌ಗಳನ್ನು ಹೊಂದಿರುವ ಈ ಬೃಹತ್ ಸಮುಚ್ಚಯದಲ್ಲಿ 822 ಫ್ಲ್ಯಾಟ್‌ಗಳನ್ನು ಈಗಾಗಲೇ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ವಾಲಿರುವ 18 ಮಹಡಿಗಳ ಟವರ್‌ನಲ್ಲಿ 49 ಫ್ಲ್ಯಾಟ್‌ಗಳಿದ್ದು, ಬಾಕಿ ಉಳಿದ 14 ಟವರ್‌ಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಬಿಲ್ಡರ್‌ಗಳು ಮುಂದಿನ 6 ತಿಂಗಳಲ್ಲಿ ಈ ಟವರ್ ಅನ್ನು ಹಂತ-ಹಂತವಾಗಿ ಕೆಡವಿ, ಮುಂಬರುವ 2 ವರ್ಷಗಳಲ್ಲಿ ಸಂಪೂರ್ಣ ಹೊಸದಾಗಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಈ ಹಿಂದೆ ನೀಡಲಾಗಿದ್ದ ಆಕ್ಯುಪೆನ್ಸಿ ಸರ್ಟಿಫಿಕೇಟ್ ರದ್ದುಗೊಳಿಸಿ ನೆಲಸಮಕ್ಕೆ ಅನುಮತಿ ನೀಡುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಬಿಲ್ಡರ್‌ಗಳು ಪತ್ರ ಬರೆದು ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ