ಬೆಂಗಳೂರು: ನಗರದ ಶಿವಾಜಿನಗರದಲ್ಲಿ ಇತ್ತೀಚೆಗೆ ನಡೆದ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಕಿಡಿಗೇಡಿಗಳಿಂದ ದೈಹಿಕ ಹಲ್ಲೆ ಮತ್ತು ಬೆದರಿಕೆಗೆ ಒಳಗಾಗಿದ್ದರೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP/GBA) ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಧೈರ್ಯ ತುಂಬಿದರು.
ಸನ್ಮಾನದ ಬಳಿಕ ಮಾತನಾಡಿದ ಸಚಿವರು, ಸಾರ್ವಜನಿಕ ಆಸ್ತಿ ಮತ್ತು ಪಾದಾಚಾರಿ ಮಾರ್ಗಗಳ ಸಂರಕ್ಷಣೆಗಾಗಿ ಅಧಿಕಾರಿಗಳು ತೋರಿದ ಧೈರ್ಯ ಹಾಗೂ ದಕ್ಷತೆ ನಿಜಕ್ಕೂ ಅಭಿನಂದನೀಯ ಎಂದರು. ಕರ್ತವ್ಯದ ಅವಧಿಯಲ್ಲಿ ಇಂತಹ ಕಠಿಣ ಸವಾಲುಗಳು ಮತ್ತು ವಿರೋಧಗಳು ಎದುರಾದರೂ ಅಧಿಕಾರಿಗಳು ಹೆದರಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯ ಹಿಂದೆ ನಮ್ಮ ಸರ್ಕಾರವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ, ಕರ್ತವ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ಖಚಿತ. ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯವೇ ಈ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಎಲ್ಲಾ ವಲಯಗಳಲ್ಲೂ ಯಾವುದೇ ರಾಜಿಯಿಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.
ಒಮ್ಮೆ ತೆರವುಗೊಳಿಸಿದ ಜಾಗವನ್ನು ಮತ್ತೆ ಅಕ್ರಮವಾಗಿ ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಅವರು, ಅಂತಹ ಸೂಕ್ಷ್ಮ ಸ್ಥಳಗಳ ಮೇಲೆ ನಿರಂತರ ನಿಗಾ ಇಡಲು ಸ್ಥಳೀಯ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಜಂಟಿ ಕಾವಲು ಪಡೆಯನ್ನು ನಿಯೋಜಿಸಲಾಗುವುದು ಎಂದರು. ಬೀದಿಬದಿ ವ್ಯಾಪಾರಿಗಳು ಮುಖ್ಯ ರಸ್ತೆಗಳ ಫುಟ್‌ಪಾತ್ ಆಕ್ರಮಿಸುವುದನ್ನು ತಡೆದು, ಅವರಿಗೆ ವ್ಯಾಪಾರ ಮಾಡಲು ನಿಗದಿಪಡಿಸಲಾದ ಪರ್ಯಾಯ ಒಳರಸ್ತೆ ಅಥವಾ ವಲಯಗಳನ್ನು ಬಳಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸನ್ಮಾನಿಸಲ್ಪಟ್ಟವರಲ್ಲಿ ಕಾರ್ಯಪಾಲಕ ಅಭಿಯಂತರ ಆತಿಫ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಾಧವರಾವ್ ಹಾಗೂ ಸಾವಿತ್ರಿ, ಸಹಾಯಕ ಅಭಿಯಂತರರಾದ ರುಚಿತಾ, ಇಂಜಿನಿಯರ್ ಗೌತಮ್ ಮತ್ತು ಜೆಸಿಬಿ ಚಾಲಕನ ಪ್ರತಿನಿಧಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ-ಪಾಲಿಕೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.