image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ: ಶೇ. 99.96 ನಮೂನೆ ವಿತರಣೆ

ಮತದಾರರ ಪಟ್ಟಿ ಪರಿಷ್ಕರಣೆ: ಶೇ. 99.96 ನಮೂನೆ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಆರಂಭಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ 23 ದಿನಗಳಲ್ಲಿ ಬಹುತೇಕ ಎಲ್ಲಾ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಶೀಘ್ರದಲ್ಲೇ ಶೇ. 100ರಷ್ಟು ಗುರಿ ತಲುಪಲಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ ಬುಧವಾರ ಸಂಜೆಯ ವೇಳೆಗೆ ಶೇ. 99.96ರಷ್ಟು ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಚುನಾವಣಾ ಆಯೋಗವು ಅರ್ಜಿಗಳ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡಿದ್ದು, ಈವರೆಗೆ 3.27 ಕೋಟಿ (ಶೇ. 67) ನಮೂನೆಗಳನ್ನು ಡಿಜಿಟಲೀಕರಣಗೊಳಿಸಿದೆ. ಇನ್ನು ಮರಣ, ಶಾಶ್ವತವಾಗಿ ಮನೆ ವಿಳಾಸ ಬದಲಾವಣೆ ಹಾಗೂ ಗೈರುಹಾಜರಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುಮಾರು 47 ಲಕ್ಷ ಮಂದಿ ಅರ್ಜಿಗಳನ್ನು ಪಡೆದಿಲ್ಲ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಬಿಎಲ್‌ಒಗಳು ಮನೆ ಮನೆಗೆ ತೆರಳಿ ವಿತರಿಸಿದ್ದ ಅರ್ಜಿಗಳನ್ನು ಮತದಾರರಿಂದ ಮರಳಿ ಪಡೆದು ಡಿಜಿಟಲೀಕರಣಗೊಳಿಸುತ್ತಿದ್ದಾರೆ ಎಂದರು. ಮನೆ-ಮನೆ ಗಣತಿ ವೇಳೆ 2002ರ ಎಸ್‌ಐಆರ್ ಪಟ್ಟಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದರೆ ಮರಣ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಪ್ರಮಾಣಪತ್ರ ಲಭ್ಯವಿಲ್ಲದಿದ್ದಲ್ಲಿ ಅಥವಾ ವ್ಯಕ್ತಿಯು ಶಾಶ್ವತವಾಗಿ ಮನೆ ವಿಳಾಸ ಬದಲಾಯಿಸಿದ್ದರೆ ಸ್ಥಳ ಮಹಜರು ನಡೆಸಿ ಸಂಬಂಧಪಟ್ಟವರಿಂದ ಸಹಿ ಮಾಡಿಸಿಕೊಳ್ಳುವಂತೆ ಬಿಎಲ್‌ಒಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಇದುವರೆಗೆ ಮತದಾರರಿಂದ ಮೂರೂವರೆ ಕೋಟಿ ಅರ್ಜಿಗಳನ್ನು ವಾಪಸ್ ಪಡೆದು ಡಿಜಿಟಲೀಕರಣಗೊಳಿಸಲಾಗಿದೆ. ಪ್ರಕ್ರಿಯೆ ಮುಕ್ತಾಯಕ್ಕೆ ಇನ್ನು 17 ದಿನಗಳು ಬಾಕಿ ಇದ್ದು, ಉಳಿದ ಒಂದೂವರೆ ಕೋಟಿ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಅರ್ಜಿ ಪಡೆದು ವಾಪಸ್ ನೀಡದಿರುವ ಮತದಾರರು ತಕ್ಷಣವೇ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡುವಂತೆ ಮನವಿ ಮಾಡಿದ ಆಯೋಗವು, ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಬಿಎಲ್‌ಒ ಹಾಗೂ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದೆ.

Category
ಕರಾವಳಿ ತರಂಗಿಣಿ