image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಭಾರತೀಯ ನೌಕಾಪಡೆಗೆ 'ಐಎನ್‌ಎಸ್ ಮಾಲ್ವನ್' ಸೇರ್ಪಡೆ

ಭಾರತೀಯ ನೌಕಾಪಡೆಗೆ 'ಐಎನ್‌ಎಸ್ ಮಾಲ್ವನ್' ಸೇರ್ಪಡೆ

ಕಾರವಾರ : ಭಾರತೀಯ ಸಾಗರ ಭದ್ರತೆ ಹಾಗೂ ಕರಾವಳಿ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಅತ್ಯಾಧುನಿಕ 'ಐಎನ್‌ಎಸ್ ಮಾಲ್ವನ್' ಆ್ಯಂಟಿ-ಸಬ್‌ಮರೀನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಶ್ರೇಣಿಯ ಯುದ್ಧನೌಕೆಯನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ. ಏಷ್ಯಾದ ಅತಿದೊಡ್ಡ ನೌಕಾನೆಲೆಯಾದ ಕಾರವಾರದ 'ಐಎನ್​​ಎಸ್ ಕದಂಬ'ದಲ್ಲಿ (ಪ್ರಾಜೆಕ್ಟ್ ಸೀಬರ್ಡ್) ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಯುದ್ಧನೌಕೆಯನ್ನು ನಿಯೋಜಿಸಲಾಯಿತು. ಕಮಾಂಡರ್ ಪ್ರವೀಣ್ ಕುಮಾರ್ ತಿವಾರಿ ಅವರು ಐಎನ್‌ಎಸ್ ಮಾಲ್ವನ್‌ನ ಮೊದಲ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿರುವ ಈ ಯುದ್ಧನೌಕೆಯು ಸುಮಾರು ಶೇ.80ರಷ್ಟು ಭಾರತೀಯ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಹೊಂದಿದ್ದು, 'ಆತ್ಮನಿರ್ಭರ ಭಾರತ' ಪರಿಕಲ್ಪನೆಗೆ ಅತ್ಯುತ್ತಮ ನಿದರ್ಶನವಾಗಿದೆ. ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್ ತೂಕ ಹೊಂದಿರುವ ಈ ನೌಕೆಯನ್ನು ಕರಾವಳಿ ಮತ್ತು ಕಡಿಮೆ ಆಳದ ಸಾಗರ (ಶ್ಯಾಲೋ ವಾಟರ್) ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿಗಳನ್ನು ನಿಗ್ರಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎ.ಪಿ.ಸಿಂಗ್, ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ತ್ರಿವಿಧ ಪಡೆಗಳಾದ ನೌಕಾಪಡೆ, ವಾಯುಪಡೆ ಹಾಗೂ ಭೂಸೇನೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ತಂತ್ರಜ್ಞಾನವು ಕೇವಲ ಸಾಮರ್ಥ್ಯವನ್ನು ನೀಡುತ್ತದೆ, ಆದರೆ ಯುದ್ಧಹಡಗನ್ನು ಅತ್ಯಂತ ಶಕ್ತಿಶಾಲಿ ಪಡೆಯನ್ನಾಗಿ ಪರಿವರ್ತಿಸುವುದು ನಾವಿಕರ ವೃತ್ತಿಪರತೆ, ನಾಯಕತ್ವ ಮತ್ತು ತಂಡದ ಶ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವಿಶೇಷ ಕಾರ್ಯಕ್ರಮದಲ್ಲಿ ಪಶ್ಚಿಮ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ವೈಸ್ ಅಡ್ಮಿರಲ್ ಸಂಜಯ್ ಸಾಧು, ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಸಿಎಂಡಿ ಜೋಶ್ ವಿಜೆ ಸೇರಿದಂತೆ ಹಲವು ಹಿರಿಯ ರಕ್ಷಣಾ ಅಧಿಕಾರಿಗಳು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ